ನಕಲಿ ಪಾಸ್ಪೋರ್ಟ್, ಮೊಹರು ಮತ್ತಿತರ ದಾಖಲುಪತ್ರಗಳು ಪತ್ತೆ: ಕಾರು ಸಹಿತ ಮೂವರ ಸೆರೆ
ಕಾಸರಗೋಡು: ಬಂದಡ್ಕ ಗ್ರಾಮದ ಕನ್ನಾಡಿತ್ತೋಡಿನಲ್ಲಿರುವ ಎನ್.ಎಚ್ ರಸ್ತೆಯಲ್ಲಿ ಬೇಡಗಂ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಂಗಾಧರನ್ ಎಂ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ವಾಹನ ತಪಾಸಣೆಯಲ್ಲಿ ತೊಡಗಿದಾಗ ಆ ದಾರಿಯಾಗಿ ಸುಳ್ಯದಿಂದ ಬರುತ್ತಿದ್ದ ಬಿಳಿ ಬಣ್ಣದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಸಂಶಯಾಸ್ಪದ ರೀತಿಯಲ್ಲಿ ಹಲವು ಪಾಸ್ಪೋರ್ಟ್ಗಳು, ಲ್ಯಾಪ್ ಟೋಪ್ ಮತ್ತು ನಕಲಿಮೊಹರುಗಳು ಹಲವು ನಕಲಿ ದಾಖಲುಪತ್ರಗಳನ್ನು ಪತ್ತೆಹಚ್ಚಿದೆ.
ಇದಕ್ಕೆ ಸಂಬಂಧಿಸಿ ತೃಕ್ಕರಿಪುರ ಸೌತ್ನ ಮಸೀದಿ ಬಳಿಯ ಉಡುಂಬುತ್ತಲದ ಪುದಿಯಕಂಡಂ ಹೌಸ್ನ ಅಹಮ್ಮದ್ ಅಬ್ರಾರ್ ಎಂ.ಎ (೨೬), ಹೊಸದುರ್ಗ ಕರುವಲಂ ಇಎಂಎಸ್ ಕ್ಲಬ್ ಬಳಿಯ ಪಡನ್ನಕ್ಕಾಡ್ ಫಾತಿಮ ಮಂಜಿಲ್ನ ಮೊಹಮ್ಮದ್ ಸಫ್ವಾನ್ ಕೆ.ವಿ (೨೫) ಮತ್ತು ತೃಕ್ಕರಿಪುರ ಸೌತ್ ಮಸೀದಿ ಬಳಿಯ ಉಡುಂಬುತ್ತಲ ಪುದಿಯಕಂಡಂ ಹೌಸ್ನ ಸಾಬಿತ್ ಎಂ.ಎ (೨೫) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೆ ಸಂಬಂಧಿಸಿ ಆ ಕಾರು ಮತ್ತು ಅದರಲ್ಲಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾರಿನ ಹಿಂದಿನ ಸೀಟಿನಲ್ಲಿ ಆಪಲ್ ಕಂಪೆನಿ ನಿರ್ಮಿತ ಲ್ಯಾಪ್ಟೋಪ್, ಅದರ ಢಿಕ್ಕಿಯಲ್ಲಿ ಹಲವು ನಕಲಿಸೀಲುಗಳು, ಎರಡು ಸೀಲ್ ಪ್ಯಾಡ್ಗಳು, ವಿವಿಧ ಬ್ಯಾಂಕ್ಗಳು, ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ವೈದ್ಯರು ಸೇರಿ ೩೭ರಷ್ಟು ನಕಲಿ ಮೊಹರುಗಳು ಅದರಲ್ಲಿ ಪತ್ತೆಯಾಗಿದೆ. ಮಾತ್ರವಲ್ಲ ಬೆಂಗಳೂರಿನ ಸೂಪರ್ ಸ್ಪೆಷಾಲಿಟಿ ಸೆಂಟರ್ವೊಂದರ ಲೆಟರ್ ಪ್ಯಾಡ್ ಹೊಂದಿರುವ ಒಂದು ಎಂಪ್ಲೋ ಯ್ಮೆಂಟ್ ಲೆಟರ್, ಹಲವು ಸರ್ಟಿಫಿಕೇಟ್ಗಳು ಪತ್ತೆಯಾಗಿದೆ. ದಕ್ಷಿಣ ಕೊರಿಯಾದ ವಿಸಾ ಡೋಕ್ಯುಮೆಂಟ್ಗಾಗಿ ಇಂತಹ ನಕಲಿ ಸರ್ಟಿಫಿಕೇಟ್ ಮತ್ತು ಸೀಲ್ಗಳನ್ನು ಬಳಸಲಾಗುತ್ತಿದೆಯೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಕಲಿ ದಾಖಲಪತ್ರಗಳನ್ನು ಸೃಷ್ಟಿಸಿ ಹಣ ಸಂಪಾದನೆ ದಾರಿಯನ್ನು ಬಂಧಿತರು ಅನುಸರಿಸುತ್ತಿದ್ದಾರೆಂಬ ಶಂಕೆಯೂ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.