ನಾಪತ್ತೆಯಾಗಿದ್ದ ಬಿಎಡ್ ವಿದ್ಯಾರ್ಥಿ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಪೆರ್ಲ: ನಾಪತ್ತೆಯಾಗಿದ್ದ ಬಿಎಡ್ ವಿದ್ಯಾರ್ಥಿ ಕೆರೆಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಎಣ್ಮಕಜೆ ಪಂಚಾಯತ್ ವ್ಯಾಪ್ತಿಯ ಶೇಣಿ ಬಳಿಯ ಪದ್ಯಾಣ ನಿವಾಸಿ ಸಿಲ್ವಸ್ಟರ್ ಕ್ರಾಸ್ತಾರ ಪುತ್ರ ಐವನ್ ಕ್ರಾಸ್ತ (೨೫) ಮೃತಪಟ್ಟ ವಿದ್ಯಾರ್ಥಿ. ಇವರು ತೊಕ್ಕೋಟ್ನ ಅಧ್ಯಾಪಕ ತರಬೇತಿ ಕೇಂದ್ರವೊಂದರ ವಿದ್ಯಾರ್ಥಿಯಾಗಿದ್ದಾರೆ. ಸೋಮವಾರ ಕಾಲೇಜಿಗೆ ಹೋಗಿ ಮರಳಿ ಬಂದ ಐವನ್ ಕ್ರಾಸ್ತಾ ಅಂದು ರಾತ್ರಿ ಊಟ ಮಾಡಿ ನಿದ್ರಿಸಿದ್ದರು. ನಿನ್ನೆ ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಐವನ್ ಕ್ರಾಸ್ತಾರನ್ನು ಕಾಣಲಿಲ್ಲ. ಇದರಿಂದ ಅವರು ಕಾಲೇಜಿಗೆ ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು. ನಿನ್ನೆ ಸಂಜೆಯಾದರೂ ಮರಳದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡುತ್ತಿದ್ದಾಗ ರಾತ್ರಿ ಹೊತ್ತಿನಲ್ಲಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಇದರಿಂದ ಕಾಸರಗೋಡು ಅಗ್ನಿಶಾಮಕದಳದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸಣ್ಣಿ ಮಾನ್ವರ್ಲ್ರ ನೇತೃತ್ವದಲ್ಲಿ ತಲುಪಿದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಇದೇ ವೇಳೆ ತನ್ನ ಸಾವಿಗೆ ತಾನೇ ಹೊಣೆಗಾರನೆಂದು ಬರೆಯಲಾದ ಪತ್ರವೊಂದು ಪತ್ತೆಯಾಗಿರುವುದಾಗಿ ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.