ನೀರುಳ್ಳಿ ಮರೆಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಪಾನ್ ಮಸಾಲೆ ಪತ್ತೆ
ಕುಂಬಳೆ: ನೀರುಳ್ಳಿ ಸಾಗಾಟದ ಮರೆಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ ೪೦ ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಪಾನ್ ಮಸಾಲೆ ಸಾಗಾಟ ನಡೆಯುತ್ತಿದೆಯೆಂಬ ಮಾಹಿತಿಯ ಆಧಾರದಲ್ಲಿ ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಸರಕು ಲಾರಿಯನ್ನು ಕುಂಬಳೆಯಲ್ಲಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಬೃಹತ್ ಪ್ರಮಾಣದ ಪಾನ್ ಮಸಾಲೆ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕನಾದ ತಿರುವನಂತಪುರ ಮಂಜಂಗೋಡು ನಿವಾಸಿ ಮುಹಮ್ಮದ್ ಅನ್ವರ್ ಎಂಬಾತನನ್ನು ಬಂಧಿಸಲಾಗಿದೆ. ಮಂಗಳೂರಿನಿಂದ ಸರಕು ಲಾರಿಯಲ್ಲಿ ಪಾನ್ ಮಸಾಲೆ ಸಾಗಾಟವಾಗುತ್ತಿರುವ ಬಗ್ಗೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಜೋಯ್ಗೆ ಮಾಹಿತಿ ಲಭಿಸಿತ್ತು. ಅವರ ನಿರ್ದೇಶದ ಮೇರೆಗೆ ಕುಂಬಳೆ ಇನ್ಸ್ಪೆಕ್ಟರ್ ಬಿಜೋಯ್ ನೇತೃತ್ವದ ಎಸ್ಐ ಟಿ.ಎಂ. ವಿಪಿನ್ ಒಳಗೊಂಡ ಪೊಲೀಸ್ ತಂಡ ಕುಂಬಳೆಯಲ್ಲಿ ವಾಹನ ತಪಾಸಣೆ ನಡೆಸಿದೆ. ಈ ವೇಳೆ ಬಂದ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಪಾನ್ ಮಸಾಲೆ ಪತ್ತೆಯಾಗಿದೆ. ಲಾರಿಯ ಅಡಿಯಲ್ಲಿ ಪಾನ್ ಮಸಾಲೆ ತುಂಬಿದ ಗೋಣಿ ಚೀಲಗಳನ್ನಿರಿಸಿ ಅದರ ಮೇಲೆ ನೀರುಳ್ಳಿಯನ್ನು ಹೇರಲಾಗಿತ್ತು. ಲಾರಿಯ ಮೇಲೆ ಸಂಶಯಗೊಂಡು ಕುಂಬಳೆ ಠಾಣೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಪಾನ್ ಮಸಾಲೆ ಪತ್ತೆಯಾಗಿದೆ.