ನೀರ್ಚಾಲು: ಗಾಂಜಾ ಸಹಿತ ಮಾದಕವಸ್ತು ಜೂಜಾಟ ದಂಧೆ ತೀವ್ರ: ವಾಹನಗಳ ಅಪರಿಮಿತ ವೇಗದಿಂದ ಅಪಾಯ ಭೀತಿ
ಬದಿಯಡ್ಕ: ನೀರ್ಚಾಲು ಪೇಟೆ ಹಾಗೂ ಪರಿಸರ ಪ್ರದೇಶಗಳಲ್ಲಿ ಗಾಂಜಾ, ಮದ್ಯ ಸಹಿತ ಮಾದಕವಸ್ತುಗಳ ಮಾರಾಟ ವ್ಯಾಪಕಗೊಂಡಿರುವುದಾಗಿಯೂ ಇದರಿಂದ ಜನರು ತೀವ್ರ ಸಮಸ್ಯೆ ಎದುರಿಸಬೇಕಾಗಿ ಬಂದಿದೆಯೆಂಬ ದೂರು ಕೇಳಿ ಬರುತ್ತಿದೆ. ಮಾದಕ ವಸ್ತುಗಳ ಜತೆಗೆ ಮಟ್ಕ, ಜೂಜಾಟವೂ ತೀವ್ರಗೊಂಡಿದೆ. ಮಾದಕವಸ್ತುಗಳ ಬಳಕೆ ಹಾಗೂ ಜೂಜಾಟಕ್ಕೆ ದೂರದ ಪ್ರದೇಶಗಳಿಂದ ಜನರು ತಲುಪುತ್ತಿದ್ದಾರೆನ್ನಲಾಗಿದೆ.
ಮದ್ಯ ಹಾಗೂ ಮಾದಕ ವಸ್ತು ಸೇವಿಸಿದ ವ್ಯಕ್ತಿಗಳು ವಾಹನಗಳನ್ನು ಅಪಾಯಕಾರಿ ರೀತಿಯಲ್ಲಿ ಚಲಾ ಯಿಸುತ್ತಿದ್ದು ಇದು ಸ್ಥಳೀಯರಿಗೆ ತೀವ್ರ ಆತಂಕ ಹುಟ್ಟಿಸಿದೆಯೆಂದು ವ್ಯಾಪಾರಿಗಳು ಸಹಿತ ನಾಗರಿಕರು ಆರೋಪಿಸುತ್ತಿದ್ದಾರೆ. ಇತ್ತೀಚೆಗೆ ನೀರ್ಚಾಲು ಮೇಲಿನ ಪೇಟೆಯಲ್ಲಿ ಅಪರಿಮಿತ ವೇಗದಲ್ಲಿ ಸಂಚರಿಸಿದ ಬೈಕ್ ಬೇರೊಂದು ಬೈಕ್ಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ನೀರ್ಚಾಲು ಮೇಲಿನ ಪೇಟೆಯಲ್ಲಿ ಕಾರು ಹಾಗೂ ದ್ವಿಚಕ್ರವಾಹನಗಳಲ್ಲಿ ತಲುಪಿ ಬಸ್ ಪ್ರಯಾಣಿಕರ ಸಮೀಪ ಸೇರುವ ತಂಡಗಳು ಮಾದಕವಸ್ತು ಉಪಯೋಗಿಸುತ್ತಿರುವುದು ಹಾಗೂ ಪರಸ್ಪರ ಹೊಡೆದಾಡಿಕೊಳ್ಳುವುದು, ಬೊಬ್ಬೆ ಹಾಕುವುದು ಕಂಡು ಬರುತ್ತಿದೆಯೆಂದು ಸ್ಥಳೀಯರು ದೂರುತ್ತಿದ್ದಾರೆ. ಇದೇ ವೇಳೆ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸ್, ಅಬಕಾರಿ ಅಧಿಕಾರಿಗಳು ಅತ್ತ ಗಮನಿಸುತ್ತಿಲ್ಲವೆಂದೂ ಸಾರ್ವಜನಿಕರು ದೂರುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ನೀರ್ಚಾಲು ಪೇಟೆಯಲ್ಲಿ ಘರ್ಷಣೆ ಸಹಿತ ಅಹಿತಕರ ಘಟನೆಗಳಿಗೆ ಕಾರಣವಾಗಲಿದೆಯೆಂದೂ ಅದರ ಮುಂಚಿತ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.