ಪೆಟ್ರೋಲ್ ಬಂಕ್‌ನಿಂದ 1.5 ಲಕ್ಷ ರೂ. ಕಳವು: ಆರೋಪಿ ಗುರುತು ಪತ್ತೆ
ಕಾಸರಗೋಡು: ಜನರು ನೋಡಿ ನಿಂತಿರುವಂತೆಯೇ ಪೆಟ್ರೋಲ್ ಖರೀದಿಸುವ ಸೋಗಿನಲ್ಲಿ ಬಂದ ಓರ್ವ ಪೆಟ್ರೋಲ್ ಬಂಕ್‌ನಿಂದ 1.5 ಲಕ್ಷ ರೂ. ಕಳವುಗೈದು ಪರಾರಿಯಾದ ಘಟನೆ ನಡೆದಿದೆ. ನೀಲೇಶ್ವರ ರಾಜಾ ರಸ್ತೆಯ ವಿಷ್ಣು ಎಜನ್ಸೀಸ್ ಎಂಬ ಹೆಸರಿನ ಪೆಟ್ರೋಲ್ ಬಂಕ್‌ನಲ್ಲಿ ಈ ಕಳವು ನಡೆದಿದೆ. ನೀಲ ಬಣ್ಣದ ಅಂಗಿ ಮತ್ತು ಧೋತಿ ಧರಿಸಿದ ವ್ಯಕ್ತಿ ನಿನ್ನೆ ಸಂಜೆ ಮುಖ ಕಾಣಿಸದ ಹಾಗೆ ಕೈಯಲ್ಲಿ ಕೊಡೆ ಹಿಡಿದು ಪೆಟ್ರೋಲ್ ಬಂಕ್‌ಗೆ ಬಂದಿದ್ದನು. ಪೆಟ್ರೋಲ್ ಖರೀದಿಸಲು ಆತ ಬಂದಿರಬಹುದೆಂದು ಪೆಟ್ರೋಲ್ ಬಂಕ್‌ನ ಸಿಬ್ಬಂದಿಗಳು ಗ್ರಹಿಸಿದ್ದರು.ಆ ವೇಳೆ ಯಾರ ಗಮನಕ್ಕೂ ಬಾರದೆ ಆತ ಪೆಟ್ರೋಲ್ ಬಂಕ್‌ಗೆ ಮೇಜಿನ ಡ್ರಾವರ್‌ನೊಳಗಿದ್ದ ಹಣ ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ. ಆ ವೇಳೆ ಪ್ರಸ್ತುತ ಪೆಟ್ರೋಲ್ ಬಂಕ್‌ನ ಅಕೌಂಟೆಂಟ್ ರಾಜೇಶ್ ಅಲ್ಲೇ ಪಕ್ಕದ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿಂದ ಅವರು ಹಿಂತಿರುಗಿ ಬಂದಾಗಲಷ್ಟೇ ಹಣ ಕಳವುಗೈಯ್ಯಲ್ಪಟ್ಟ ವಿಷಯ ಅವರ ಗಮನಕ್ಕೆ ಬಂದಿದೆ. ಆ ಬಗ್ಗೆ ನೀಡಲಾದ ದೂರಿನಂತೆ ನೀಲೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಬಂಕ್‌ನ ಹಾಗೂ ಪರಿಸರದ ಸಿಸಿ ಟಿವಿಗಳ ದೃಶ್ಯಗಳನ್ನು ಪರಿಶೀಲಿಸಿದಾಗ ಅದರಿಂದ ಆರೋಪಿಯ ಗುರುತು ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ. ಹಣ ಕದ್ದ ವ್ಯಕ್ತಿ ಇರಿಟ್ಟಿ ಚಾಳಿಯನ್ ತೋಟ್ಟಿನ ಕುರುವಿ ಸಜು ಅಲಿಯಾಸ್ ಸಜೀವನ್ ಆಗಿರುವುದಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರ ಜಾಡು ಹಿಡಿದು ಆತನ ಪತ್ತೆಗಾಗಿ ನೀಲೇಶ್ವರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಿಬಿನ್ ಜೋಯ್‌ರ ನೇತೃತ್ವದ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.