ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಮಂಜೂರಾದ ಕಿಫ್ಬಿ ಫಂಡ್ ಉಪಯೋಗಿಸದ ವಿರುದ್ಧ ಎನ್ಸಿಪಿ-ಎಸ್ ಆಂದೋಲನಕ್ಕೆ
ಉಪ್ಪಳ: ಮಂಜೇಶ್ವರ ತಾಲೂಕು ಆಸ್ಪತ್ರೆಯಾದ ಮಂಗಲ್ಪಾಡಿ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕಿಫ್ಬಿಯಿಂದ ಮಂಜೂರಾದ ಹದಿನೇಳೂವರೆ ಕೋಟಿ ರೂ. ಉಪಯೋಗಿಸಿ ನಿರ್ಮಿಸಬೇಕಾದ ಕಟ್ಟಡದ ಕಾಮಗಾರಿ ಕೂಡಲೇ ಆರಂ ಭಿಸಬೇಕೆಂದು ಆಗ್ರಹಿಸಿ ಆಂದೋಲನ ನಡೆಸುವುದಾಗಿ ಎನ್ಸಿಪಿ-ಎಸ್ ಮಂಜೇಶ್ವರ ಬ್ಲೋಕ್ ಸಮಿತಿ ಸುದ್ಧಿಗೋಷ್ಠಿಯಲ್ಲಿ ಆಗ್ರಹಿಸಿದೆ. ಆಸ್ಪತ್ರೆ ಅಭಿವೃದ್ಧಿಗಾಗಿ ವರ್ಷಗಳ ಹಿಂದೆಯೇ ಸರಕಾರ ಕಿಫ್ಬಿಯಿಂದ ಮೊತ್ತ ಮಂಜೂರು ಮಾಡಿದ್ದರೂ ಅದು ಉಪಯೋಗಶೂನ್ಯವಾಗಿ ಉಳಿದಿದೆ. ಕಿಡ್ಕೋಗೆ ನಿರ್ಮಾಣ ಹೊಣೆ ನೀಡಿದ ಹಿನ್ನೆಲೆಯಲ್ಲಿ ಹಳೆ ಕಟ್ಟಡವನ್ನು ಮುರಿದು ತೆಗೆದು ಮಣ್ಣು ತಪಾಸಣೆ ನಡೆಸಿದುದಲ್ಲದೆ ಇತರ ಕಾರ್ಯಗಳು ನಡೆದಿಲ್ಲ. ಸ್ಥಳೀಯ ಶಾಸಕ, ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ತಿಳಿಸದೆ ದೂರ ಉಳಿಯುತ್ತಿರುವುದಾಗಿ ಅವರು ಆರೋಪಿಸಿದರು. ವಿವಿಧ ಸಂಘಟನೆಗಳು ಈ ಬಗ್ಗೆ ನಡೆಸಿದ ಹೋರಾಟದಿಂದಾಗಿ ಮೊತ್ತ ಮಂಜೂರು ಮಾಡಲಾಗಿದೆ. ಆದರೆ ಆ ಹಣವನ್ನು ಉಪಯೋಗಿಸದಿ ರುವುದರ ಹಿನ್ನೆಲೆಯಲ್ಲಿ ಎನ್ಸಿಪಿ-ಎಸ್ ಆಂದೋಲನಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದರು. ತಾಲೂಕು ಆಸ್ಪತ್ರೆಯೊಂದು ಕುಟುಂಬ ಆರೋಗ್ಯ ಕೇಂದ್ರದ ಮಟ್ಟಕ್ಕೆ ಅಧಃಪಥನಗೊಂಡಿದೆ ಎಂದು ಅವರು ಆರೋಪಿಸಿದ್ದು, ಆಸ್ಪತ್ರೆಯ ಅಭಿವೃದ್ಧಿಗೆ ತಡೆ ಉಂಟುಮಾಡಲು ಯಾರು ಯತ್ನಿಸಿದರೂ ಅವರನ್ನು ಜನರೊಂದಿಗೆ ಸೇರಿ ತಡೆಯುವುದಾಗಿ ಎನ್ಸಿಪಿ-ಎಸ್ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸುಬೈರ್ ಪಡ್ಪು, ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಮಹಮ್ಮೂದ್ ಕೈಕಂಬ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಆನೆಬಾಗಿಲು, ಸಿದ್ದೀಕ್ ಕೈಕಂಬ, ಖದೀಜ ಮೊಗ್ರಾಲ್ ಭಾಗವಹಿಸಿದರು.