ಮಂಜೇಶ್ವರದಲ್ಲಿ ಮತ್ತೆ ಮಾದಕ ವಸ್ತು ಬೇಟೆ : 72 ಗ್ರಾಂ ಎಂಡಿಎಂಎ ಸಹಿತ ಓರ್ವ ಬಂಧನ
ಉಪ್ಪಳ: ಮಂಜೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಮತ್ತೆ ಮಾದಕ ವಸ್ತು ಪತ್ತೆಹಚ್ಚಲಾಗಿದೆ. 72.73 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಕಾಞಂಗಾಡ್ ಇಟ್ಟಮ್ಮಲ್ ನಿವಾಸಿ ನಿಸಾಮುದ್ದೀನ್ (35) ಎಂಬಾತನನ್ನು ಬಂಧಿಸಲಾಗಿದೆ. ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ಸಿ.ಕೆ. ಅವರ ಮೇಲ್ನೋಟದಲ್ಲಿ ತಲಪ್ಪಾಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ ನಿಸಾಮುದ್ದೀನ್ನನ್ನು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಎಂಡಿಎಂಎ ಪತ್ತೆಯಾಗಿದೆ. ಮಂಜೇಶ್ವರದ ಗುಪ್ತ ಕೇಂದ್ರದಿಂದ ಮಾದಕ ವಸ್ತು ಖರೀದಿಸಿ ಊರಿಗೆ ಮರಳುತ್ತಿದ್ದಾಗ ಈತ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಇನ್ಸ್ಪೆಕ್ಟರ್ ಅನೂಬ್ ಕುಮಾರ್, ಎಸ್.ಐ.ಗಳಾದ ರತೀಶ್ಗೋಪಿ, ಉಮೇಶ್, ಎ. ಎಸ್.ಐ. ಅತುಲ್ರಾಮ್, ಎಸ್ಸಿಪಿಒ ರಾಜೇಶ್ ಕುಮಾರ್, ಸಿಪಿಒ ಅಬ್ದುಲ್ ಸಲಾಂ ಎಂಬಿವರನ್ನೊಳಗೊಂಡ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸಿದೆ.
ಹೊಸ ವರ್ಷ ಆಚರಣೆಗಾಗಿ ಭಾರೀ ಪ್ರಮಾಣದಲ್ಲಿ ಮಾದಕ ವಸ್ತು ಸಾಗಾಟ ಸಾಧ್ಯತೆಯಿದೆಯೆಂದು ವರದಿ ಲಭಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪರ ನಿರ್ದೇಶ ಪ್ರಕಾರ ‘ಆಪರೇಶನ್ ನ್ಯೂ ಇಯರ್ ಹಂಟ್’ ಕಾರ್ಯಾಚರಣೆ ಆರಂಭಿಸಲಾಗಿದೆ. ಇದರಂತೆ ನಿನ್ನೆ ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ಪತ್ತೆಯಾಗಿದೆ. ಮೊನ್ನೆ ಮೀಂಜದ ಕೆಂಪುಕಲ್ಲು ಕೋರೆಯೊಂದರ ಸಮೀಪ ಪೊದೆಗೆಳೆಡೆ ಬಚ್ಚಿಡಲಾಗಿದ್ದು 22 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು. ಕಾಸರಗೋಡು ಆರ್ಡಿ ನಗರದಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ ಸ್ಕೂಟರ್ನಲ್ಲಿ ಸಾಗಿಸಿದ 30.22 ಗ್ರಾಂ ಎಂಡಿಎಂಎ ಹಾಗೂ 13,300 ರೂ. ಸಹಿತ ಮಾಸ್ತಿಕುಂಡ್ ನಿವಾಸಿಯನ್ನು ಬಂಧಿಸಲಾಗಿತ್ತು.