ಮಣ್ಣಂಗುಳಿ ಮೈದಾನ ಪರಿಸರ, ರಸ್ತೆಗಳಲ್ಲಿ ತುಂಬಿಕೊಂಡ ತ್ಯಾಜ್ಯ: ದುರ್ವಾಸನೆಯಿಂದ ಸಂಚಾರಕ್ಕೆ ಸಮಸ್ಯೆ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನದ ಪರಿಸರದಲ್ಲಿ ಕಂಡು ಬರುವ ತ್ಯಾಜ್ಯ ರಾಶಿಯಿಂದ ಜನರ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೈದಾನದ ಸುತ್ತಲೂ ಇರುವ ರಸ್ತೆಗಳಲ್ಲಿ ತ್ಯಾಜ್ಯ ತುಂಬಿಕೊAಡಿದೆ. ಇಲ್ಲಿನ ಕೋಡಿಬೈಲು ರಸ್ತೆ, ಕರವೂರು ರಸ್ತೆ ಹಾಗೂ ಅಂಗನವಾಡಿ ಪರಿಸರದ ರಸ್ತೆ ಉದ್ದಕ್ಕೂ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳು ತುಂಬಿ ತುಳುಕುತ್ತಿದ್ದರೂ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಲು ಕ್ರಮಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ವಿವಿಧ ಕಡೆಗಳಿಂದ ಜನರು ಮೈದಾನಕ್ಕೆ ತಲುಪುತ್ತಿದ್ದು, ಸುತ್ತಮುತ್ತ ಹಲವಾರು ಮನೆಗಳು ಹೊಂದಿರುವ ಪ್ರದೇಶ ಇದಾಗಿದೆ. ಶುಚೀಕರಣವಿಲ್ಲದೆ ಮೈದಾನ ಪರಿಸರ ಶೋಚನೀಯವಸ್ಥೆಗೆ ತಲುಪಿದೆ. ಈ ಹಿಂದೆ ಹೆದ್ದಾರಿ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸಲಾಗುತ್ತಿದ್ದು, ಬಳಿಕ ಪಂಚಾಯತ್ ವತಿಯಿಂದ ಉಪ್ಪಳದಿಂದ ಬಂದ್ಯೋಡು ತನಕ ಸಿಸಿ ಕ್ಯಾಮರ ಅಳವಡಿಸಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚಿ ಅವರ ವಿರುದ್ದ ಕ್ರಮಕ್ಕೆ ಮುಂದಾಗಿದ್ದರು. ಇದರಿಂದ ಹೆದ್ದಾರಿ ಬದಿಯಲ್ಲಿ ಉಪೇಕ್ಷಿಸುವುದು ಕ್ರಮೇಣ ನಿಂತುಹೋಗಿ ಇದೀಗ ಒಳರಸ್ತೆಯಲ್ಲಿ ಉಪೇಕ್ಷಿಸುವುದು ವ್ಯಾಪಕಗೊಂಡಿದೆ. ಒಳ ರಸ್ತೆಯಲ್ಲೂ ಕ್ಯಾಮರ ಅಳವಡಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.