ಮನೆಯಲ್ಲಿ ನಾಲ್ಕೂವರೆ ಕೆ ಜಿ ಗಾಂಜಾ ಪತ್ತೆಯಾದ ಪ್ರಕರಣ: ಮೂವರಿಗೆ ಸಜೆ, ದಂಡ
ಕಾಸರಗೋಡು: ಮನೆಯಲ್ಲಿ ಗಾಂಜಾ ದಾಸ್ತಾನು ಇರಿಸಿದ ಪ್ರಕರಣದ ಮೂವರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯ ಅವರು ತಲಾ ಎರಡು ವರ್ಷ ಸಜೆ ಮತ್ತು 20,000 ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ರಾಮದಾಸನಗರ ನಾಂಗುಳಿ ಬದಿರಾ ನಿವಾಸದ ಉಣ್ಣಿ ಕೆ.ಬಿ. (54), ಮುಳ್ಳೇರಿಯ ಕುಕ್ಕುಂಗೈ ಹೌಸಿನ ಹಸೈನಾರ್ ಡಿ. (31) ಮತ್ತು ಚೆರ್ಕಳ ಕುಂಡಡ್ಕ ತೋಟತ್ತಿಲ್ ಹೌಸ್ನ ರತೀಶ್ ಕೆ. ಅಲಿಯಾಸ್ ಉಣ್ಣಿ (29) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2019 ಮಾರ್ಚ್ 24ರಂದು ಕೂಡ್ಲು ರಾಮದಾಸನಗರದ ನಾಂಗುಳಿಯ ಮನೆಯಲ್ಲಿ ಅಂದು ಕಾಸರಗೋಡು ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಬಬೀಶ್ರ ನೇತೃತ್ವದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ಲಿ ಬಚ್ಚಿಡಲಾಗಿದ್ದ ನಾಲ್ಕು ಕಿಲೋ ಗಾಂಜಾ ಪತ್ತೆಹಚ್ಚಿ ಅದಕ್ಕೆ ಸಂಬಂಧಿಸಿ ಈ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ನಂತರ ಇನ್ಸ್ಪೆಕ್ಟರ್ ಶಾಜಿ ಪಟ್ಟೇರಿ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಪಿ. ಸತೀಶನ್ ಮತ್ತು ಎಂ. ಚಿತ್ರಕಲ ನ್ಯಾಯಾಲಯದಲ್ಲಿ ವಾದಿಸಿದ್ದರು.