ಮನೆ ಮೇಲೆ ಗುಂಡು ಹಾರಾಟ: ಕಿಟಿಕಿ ಗಾಜು ಹಾನಿ ನಿದ್ರಿಸುತ್ತಿದ್ದ ಕುಟುಂಬ ಅಪಾಯದಿಂದ ಪಾರು
ಮಂಜೇಶ್ವರ: ಮುಂಜಾನೆ ಹೊತ್ತಿನಲ್ಲಿ ಮನೆ ಮೇಲೆ ಗುಂಡು ಹಾರಾಟ ನಡೆದ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಬಳಿ ನಡೆದಿದೆ. ಗುಂಡು ತಾಗಿ ಬೆಡ್‌ರೂಂನ ಕಿಟಿಕಿ ಗಾಜು ಪುಡಿಗೈಯ್ಯಲ್ಪಟ್ಟಿದೆ. ಶಬ್ದ ಕೇಳಿ ಮನೆಯವರು ನಿದ್ರೆಯಿಂದ ಎಚ್ಚೆತ್ತು ನೋಡಿದಾಗಲೇ ಘಟನೆ ಅರಿವಿಗೆ ಬಂದಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ.
ವರ್ಕಾಡಿ ಜಂಕ್ಷನ್ ಬಳಿಯ ನಲ್ಲೆಂಗಿಪದವು ನಿವಾಸಿ ಹರೀಶ ಬಿ.ಎಂ ಎಂಬವರ ಮನೆ ಮೇಲೆ ಗುಂಡು ಹಾರಾಟ ನಡೆದಿದೆ. ನಿನ್ನೆ ಮುಂಜಾನೆ 2.30ರ ವೇಳೆ ಈ ಘಟನೆ ನಡೆದಿದೆ. ಹರೀಶ್ ಹಾಗೂ ಕುಟುಂಬ ಮನೆಯೊಳಗೆ ನಿದ್ರಿಸುತ್ತಿದ್ದರು. ಭಾರೀ ಶಬ್ದ ಕೇಳಿ ಇವರು ಎಚ್ಚೆತ್ತು ನೋಡಿದಾಗ ಕಿಟಿಕಿಯ ಗಾಜು ಪುಡಿಗೈಯ್ಯಲ್ಪಟ್ಟಿತ್ತು. ಬಳಿಕ ನಡೆಸಿದ ಶೋಧ ವೇಳೆ ಬೆಡ್‌ರೂಂನಲ್ಲಿ ಮದ್ದುಗುಂಡು ಪತ್ತೆಯಾಗಿದೆ. ಕೂಡಲೇ ಅವರು ಮನೆಯಿಂದ ಹೊರಗೆ ಬಂದು ರಸ್ತೆಯತ್ತ ಬೆಳಕು ಹಾಯಿಸಿದಾಗ ಒಂದು ಕಾರು ಹಾಗೂ ಎರಡು ಸ್ಕೂಟರ್‌ಗಳು ಹಾದುಹೋಗುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ಬಗ್ಗೆ ಹರೀಶ್ ಕೂಡಲೇ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ತಪಾಸಣೆ ನಡೆಸಿದರು.
ಅನಂತರ ಫಾರೆನ್ಸಿಕ್ ತಜ್ಞರು ಮನೆಗೆ ತಲುಪಿ ಪರಿಶೀಲನೆ ನಡೆಸಿದ್ದು, ಬೆಡ್‌ರೂಂನಲ್ಲಿ ಪತ್ತೆಯಾಗಿರುವುದು ಮದ್ದು ಗುಂಡು ಆಗಿದೆಯೆಂದು ಈ ವೇಳೆ ಖಚಿತಪಡಿಸಲಾಗಿದೆ. ಘಟನೆ ಕುರಿತು ತನಿಖೆ ಆರಂಭಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. ಬೇಟೆಗಾರರ ತಂಡ ಹಂದಿಗೆ ಗುಂಡು ಹಾರಿಸಿದಾಗ ಅದು ಗುರಿತಪ್ಪಿ ಮನೆಯ ಕೊಠಡಿಗೆ ನುಗ್ಗಿರುವುದಾಗಿ ಪೊಲೀಸರು ಸಂಶಯಿಸುತ್ತಿದ್ದಾರೆ. ಕಾಡುಹಂದಿಗಳ ಉಪಟಳ ಈ ಪ್ರದೇಶದಲ್ಲಿ ತೀವ್ರಗೊಂಡಿರುವುದಾಗಿ ಹೇಳಲಾಗುತ್ತಿದೆ. ಗುಂಡು ಹಾರಿಸಿದವರ ಪತ್ತೆಗಾಗಿ ಸಮೀಪದ ಸಿಸಿ ಟಿವಿ ದೃಶಗಳನ್ನು ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.