ಮಹಿಳಾ ಪೊಲೀಸ್ ಸಿಬ್ಬಂದಿಯ ಇರಿದು ಬರ್ಭರ ಕೊಲೆ :ತಡೆಯಲು ಬಂದ ತಂದೆಗೂ ಇರಿತ; ಆರೋಪಿ ಪತಿ ಸೆರೆ 

ಕಾಸರಗೋಡು: ಮಹಿಳಾ ಪೊಲೀಸ್ ಸಿಬ್ಬಂದಿಯನ್ನು   ಪತಿಯೇ ಇರಿದು ಕೊಲೆಗೈದಿದ್ದು, ಅದನ್ನು ತಡೆಯಲು ಬಂದ  ಆಕೆಯ ತಂದೆಗೂ ಇರಿದು ಗಂಭೀರ ಗಾಯಗೊಳಿಸಿದ ಭೀಕರ ಘಟನೆ ನಡೆದಿದೆ.

ಚಂದೇರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಕರಿವೆಳ್ಳೂರು ಪಲಿಯೇರಿ ಕೊವ್ವಲ್ ನಿವಾಸಿ  ಪಿ. ದಿವ್ಯಶ್ರೀ (33) ಕೊಲೆ ಗೀಡಾದ ಯುವತಿ. ಇರಿತವನ್ನು ತಡೆಯಲು ಬಂದ ದಿವ್ಯಶ್ರೀಯ ತಂದೆ ಕೆ. ವಾಸು (65) ಅವರಿಗೂ ಇರಿದು ಗಾಯಗೊಳಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿ ದಿವ್ಯಶ್ರೀಯ ಪತಿ ರಾಜೇಶ್ (33)ನನ್ನು ಕೊಲೆ ನಡೆದ ಕೆಲವೇ ತಾಸುಗಳೊಳಗೆ ಪೊಲೀಸರು ಬಂಧಿಸಿ ದ್ದಾರೆ. ನಿನ್ನೆ ಸಂಜೆ ಸುಮಾರು ಆರು ಗಂಟೆ ವೇಳೆಗೆ ಇಡೀ ಊರನ್ನೇ ನಡುಗಿಸಿದ ಈ ಭೀಕರ ಘಟನೆ ನಡೆದಿದೆ.

ದಿವ್ಯಶ್ರೀ ಮತ್ತು ರಾಜೇಶ್‌ರದ್ದು ಪ್ರೇಮ ವಿವಾಹವಾಗಿತ್ತು. ರಾಜೇಶ್ ಪೈಂಟಿಂಗ್ ಕಾರ್ಮಿಕನಾಗಿದ್ದಾನೆ. ಮದುವೆ ಬಳಿಕ  ಅವರಿಬ್ಬರ ಮಧ್ಯೆ ವೈಮನಸ್ಸು ಮೂಡಿಬಂದಿತ್ತು. ಅದರಿಂದಾಗಿ ದಿವ್ಯಶ್ರೀ   ತಂದೆ ಮನೆಗೆ ವಾಸ ಬದಲಾಯಿಸಿದ್ದರು.  ಮಾತ್ರವಲ್ಲದೆ ವಿವಾಹ ವಿಚ್ಛೇಧನಕ್ಕಾಗಿ ಅವರು ಕಣ್ಣೂರು ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನಿನ್ನೆ ಸಂಜೆ ಆರೋಪಿ ಬೈಕ್‌ನಲ್ಲಿ ದಿವ್ಯಶ್ರೀಯ ಮನೆಗೆ ಬಂದು ಅವರ ಜತೆಗೆ ಜಗಳಕ್ಕಿಳಿದನೆಂದೂ ನಂತರ ತಲ್ವಾರಿನಿಂದ  ಆತ ದಿವ್ಯಶ್ರೀಯನ್ನು ಕಡಿದನೆಂದು ಆರೋಪಿಸಲಾಗಿದೆ. ಅದನ್ನು ತಡೆಯಲೆತ್ನಿಸಿದ ದಿವ್ಯಶ್ರೀಯ ತಂದೆ ವಾಸುರ ಮೇಲೂ ಆರೋಪಿ ದಾಳಿ ನಡೆಸಿದ್ದನೆನ್ನಲಾಗಿದೆ.

ಗಂಭೀರ ಗಾಯಗೊಂಡ ದಿವ್ಯಶ್ರೀ ಪ್ರಾಣ ಭಯದಿಂದ ಮನೆಯಿಂದ ಹೊರಕ್ಕೆ ಓಡಿ ಮನೆ ಗೇಟಿನ ಬಳಿ ತಲುಪಿದಾಗ ಅಲ್ಲೇ ಕುಸಿದು ಬಿದ್ದಿದ್ದಾರೆ. ಅದನ್ನು ಕಂಡ ಆ ಪರಿಸರದವರು ದಿವ್ಯಶ್ರೀ ಮತ್ತು ವಾಸುರನ್ನು ತಕ್ಷಣ ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆ ವೇಳೆ ದಿವ್ಯಶ್ರೀಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಕೊಲೆ ನಡೆದ ಬಳಿಕ ಆರೋಪಿ ರಾಜೇಶ್ ತನ್ನ ಬೈಕ್‌ನ್ನು ಅಲ್ಲೇ ಉಪೇಕ್ಷಿಸಿ ಪರಾರಿಯಾಗಿದ್ದನು. ಅವನಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದಾಗ ನಿನ್ನೆ ರಾತ್ರಿ ಕಣ್ಣೂರು ಪುದಿಯತಿರುವಿನ ಬಾರ್ ಬಳಿಯಿಂದ ಆತನನ್ನು ಸೆರೆಹಿಡಿಯು ವಲ್ಲಿ  ವಳಪಟ್ಟಣಂ ಪೊಲೀಸರು ಸಫಲರಾಗಿದ್ದಾರೆ.

ನಂತರ ಆತನನ್ನು ಪಯ್ಯನ್ನೂರು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಕೊಲೆಗೈಯ್ಯಲ್ಪಟ್ಟ ದಿವ್ಯಶ್ರೀಯ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

ದಿವ್ಯಶ್ರೀ ತಂದೆಯ ಹೊರತಾಗಿ ಪುತ್ರ ಆಶಿಕ್ (7ನೇ ತರಗತಿ ವಿದ್ಯಾರ್ಥಿ), ಸಹೋದರಿ ಪ್ರವಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದಿವ್ಯಶ್ರೀಯ ತಾಯಿ ನಿವೃತ್ತ ಜಿಲ್ಲಾ ನರ್ಸಿಂಗ್ ಆಫೀಸರ್ ಆಗಿದ್ದ ಪಾರು ಈ ಹಿಂದೆ ನಿಧನರಾಗಿದ್ದರು.  ತಿರುವನಂತಪುರ ಪೊಲೀಸ್ ಬೆಟಾಲಿಯನ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ದಿವ್ಯಶ್ರೀ ವರ್ಕಿಂಗ್ ಅರೇಂಜ್‌ಮೆಂಟ್ ಪ್ರಕಾರ ಒಂದೂವರೆ ವರ್ಷದ ಹಿಂದೆಯಷ್ಟೇ ಚಂದೇರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page