ಮಾದಕ ಗುಂಡು ಹಾರಿಸಿ ಸೆರೆ ಹಿಡಿಯಲಾದ ಹುಲಿ ಸಾವು
ಕಣ್ಣೂರು: ಕಣ್ಣೂರು ಕೊಟ್ಟಿಯೂರಿನಲ್ಲಿ ಕಂಡು ಬಂದು ಬಳಿಕ ಮಾದಕ ಗುಂಡು ಹಾರಿಸಿ ಸೆರೆ ಹಿಡಿಯಲ್ಪಟ್ಟ ಹುಲಿ ಸಾವನ್ನಪ್ಪಿದೆ. ಇದು ಸುಮಾರು ಹತ್ತು ವರ್ಷ ಪ್ರಾಯಗ ಗಂಡು ಹುಲಿಯಾಗಿದೆ.
ನಿನ್ನೆ ಮುಂಜಾನೆ ೪ ಗಂಟೆಗೆ ಸ್ಥಳೀಯ ಟಾಪಿಂಗ್ ಕಾರ್ಮಿಕ ರೋರ್ವರು ಟಾಪಿಂಗ್ ಕೆಲಸಕ್ಕಾಗಿ ಕೊಟ್ಟಿಯೂರು ಪನ್ನಿಯಾರಮಲೆ ಮಿಲ್ನ ರಬ್ಬರ್ ತೋಟಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ, ಅಲ್ಲೇ ಪಕ್ಕದ ಖಾಸಗಿ ವ್ಯಕ್ತಿಯೋರ್ವರ ಹಿತ್ತಿಲ ಕಬ್ಬಿಣದ ಬೇಲಿಯಲ್ಲಿ ಸಿಲುಕಿ ಹುಲಿ ಪ್ರಾಣವೇದನೆಯಿಂದ ನರಳಾಡುತ್ತಿರುವುದನ್ನು ಕಂಡಿದ್ದಾರೆ. ಅದರಂತೆ ನೀಡಲಾದ ಮಾಹಿತಿಯಂತೆ ವಯನಾಡಿನಿಂದ ಆಗಮಿಸಿದ್ದ ಪಶು ವೈದ್ಯರುಗಳ ನೇತೃತ್ವದ ತಂಡ ನಿನ್ನೆ ೧೧ ಗಂಟೆಗೆ ಹುಲಿ ಮೇಲೆ ಮಾದಕ ಗುಂಡು ಹಾರಿಸಿ ಅದನ್ನು ಸೆರೆ ಹಿಡಿಯಲಾಗಿತ್ತು. ನಂತರ ಅದನ್ನು ಮೃಗಾಲಯಕ್ಕೆ ಸಾಗಿಸುವ ವೇಳೆ ಅದು ಸಾವನ್ನಪ್ಪಿದೆ. ಅದರ ಕಳೇಬರವನ್ನು ಈಗ ಪೂಕಾಟ್ ವೆಟರ್ನರೀ ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಅರಣ್ಯ ಪಾಲಕರು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಬೇಲಿಯಲ್ಲಿ ಸಿಲುಕಿಕೊಂಡಿದ್ದ ಹುಲಿ ಸಣ್ಣ ಪುಟ್ಟ ಗಾಯ ಮಾತ್ರವೇ ಹೊಂದಿತ್ತೆಂದು ಅರಣ್ಯ ಪಾಲಕರು ಹೇಳಿದ್ದಾರೆ.