ಮುಳಿಯಾರು ಪಂಚಾಯತ್‌ನಲ್ಲಿ ವ್ಯಾಪಕಗೊಂಡ ಕಾಡುಹಂದಿ ಉಪಟಳ: ವ್ಯಾಪಕ ಕೃಷಿ ನಾಶ
ಬೋವಿಕ್ಕಾನ: ಮುಳಿಯಾರು ಪಂಚಾಯತ್ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಕಾಡುಹಂದಿಗಳ ಹಾವಳಿ ಯಿಂದ ಜನರು ತೀವ್ರ ಆತಂಕದ ಲ್ಲಿದ್ದು, ಅದರ ಜತೆಗೆ ಕಾಡುಹಂದಿಗಳ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ.
ಈ ಪ್ರದೇಶದ ಕೃಷಿ ತೋಟಗಳಿಗೆ ಕಾಡುಹಂದಿಗಳು ಹಿಂಡಾಗಿ ತಲುಪಿ ಬಾಳೆ, ಮರಗೆಣಸು, ಸುವರ್ಣಗೆಡ್ಡೆ, ತೆಂಗಿನ ಸಸಿಗಳು ಸೇರಿದಂತೆ ವ್ಯಾಪ ಕವಾಗಿ ಕೃಷಿಗಳನ್ನು ನಾಶಗೊಳಿಸುತ್ತಿವೆ ಯೆಂದು ಕೃಷಿಕರು ತಮ್ಮ ಅಳಲನ್ನು ವ್ಯಕ್ತಪಡಿಸತೊಡಗಿದ್ದಾರೆ. ಆಲೂರು ಪ್ರದೇಶದಲ್ಲಂತೂ ಕಾಡು ಹಂದಿಗಳ ಉಪಟಳ ಅತೀ ಹೆಚ್ಚು ಉಂಟಾಗುತ್ತಿದೆ. ಆಲೂರಿನಲ್ಲಿರುವ ತೋಟಗಾರಿಕಾ ನಿಗಮಕ್ಕೆ ಸೇರಿದ ಗುಡ್ಡಗಾಡಿನಿಂದ ರಾತ್ರಿವೇಳ ಕಾಡುಹಂದಿಗಳು ಹಿಂಡಾಗಿ ತೋಟಗಳಿಗೆ ನುಗ್ಗಿ ವ್ಯಾಪಕ ಕೃಷಿ ನಾಶ ಉಂಟುಮಾಡುತ್ತಿದೆ.
ಕಳೆದ ಒಂದು ವಾರದಿಂದ ಈ ಪ್ರದೇಶದಲ್ಲಿ ವ್ಯಾಪಕವಾಗಿ ಕಾಡುಹಂದಿಗಳು ಕೃಷಿ ತೋಟಗಳನ್ನು ಹಾನಿಗೊಳಿಸಿವೆ. ಕಾಡುಹಂದಿಗಳ ಉಪಟಳದಿಂದಾಗಿ ಸಂಜೆ ಬಳಿಕ ಜನರು ಮನೆಯಿಂದ ಹೊರಗಿಳಿ ಯಲು ಹೆದರುತ್ತಿದ್ದಾರೆ. ಕಾಡುಹಂ ದಿಗಳು ಜನರ ಮೇಲೂ ದಾಳಿ ನಡೆಸುತ್ತಿದೆ. ಆದ್ದರಿಂದ ಕಾಡು ಹಂದಿಗಳ ಉಪಟಳ ನಿಯಂತ್ರಿಸಲು ಸಂಬಂಧಪಟ್ಟ ಇಲಾಖೆ ಅಗತ್ಯದ ಕ್ರಮ ಕೈಗೊಳ್ಳಬೇಕು ಮಾತ್ರವಲ್ಲ ಅವುಗಳನ್ನು ಬೇಟೆಯಾಡಲು ಅಗತ್ಯದ ಸಿಬ್ಬಂದಿಗಳನ್ನು ನೇಮಿಸಬೇಕು, ಇದರ ಹೊರತಾಗಿ ಕೃಷಿ ನಾಶದಿಂದ ಉಂಟಾಗಿರುವ ನಾಶನಷ್ಟಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಈ ಪ್ರದೇಶದ ಕೃಷಿಕರು ಆಗ್ರಹಪಟ್ಟಿದ್ದಾರೆ.