ಲೋಕಸಭಾ ಚುನಾವಣೆ: ಕಣ್ಣೂರು ಈ ಬಾರಿ ಯಾರಿಗೆ?

ಕಣ್ಣೂರು: ಕಣ್ಣೂರು ಲೋಕಸಭಾ ಕ್ಷೇತ್ರ ಕೇರಳದ ಜನರು ಅತೀ ಹೆಚ್ಚು ಗಮನಿಸುತ್ತಿರುವ ಕ್ಷೇತ್ರಗಳಲ್ಲೊಂದಾಗಿದೆ. ಏಕೆಂದರೆ ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ತವರು ಜಿಲ್ಲೆಯಾಗಿದೆ.

ತಳಿಪರಂಬ, ಇರಿಕ್ಕೂರ್, ಅಳಿಕ್ಕೋಡ್, ಕಣ್ಣೂರು, ಧರ್ಮಡಂ, ಮಟ್ಟನ್ನೂರು ಮತ್ತು ಪರಾವೂರು ಎಂಬೀ ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಲೋಕಸಭಾ ಕ್ಷೇತ್ರ ೧೯೫೨ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಈ ಕ್ಷೇತ್ರದಲ್ಲಿ ಒಟ್ಟು ೧೨,೬೨,೧೪೪ ಮತದಾರರಿದ್ದಾರೆ.

೨೦೧೯ರಲ್ಲಿ ನಡೆದ ಚುನಾವಣೆ ಯಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಕೆ. ಸುಧಾಕರನ್ ೫,೨೯,೭೪೧ (ಶೇ. ೫೦.೭೪) ಮತಗಳನ್ನು ಪಡೆದು ೯೪,೫೫೯ ಮತಗಳ ಅಂತರದಿಂದ ಗೆದ್ದು ಲೋಕಸಭೆಗೆ ಆಯ್ಕೆಗೊಂಡಿದ್ದರು. ಅಂದು ಎಡರಂಗ (ಸಿಪಿಎಂ) ಉಮೇದ್ವಾರರಾಗಿ ಸ್ಪರ್ಧಿಸಿದ್ದ ಪಿ.ಕೆ. ಶ್ರೀಮತಿ ಟೀಚರ್‌ಗೆ ೪,೩೫,೧೮೨ (ಶೇ. ೪೧.೬೮) ಮತ ಮತ್ತು ಬಿಜೆಪಿ (ಎನ್‌ಡಿಎ)ಯ ಸಿ.ಕೆ. ಪದ್ಮನಾಭನ್‌ರಿಗೆ ೬೮,೫೦೯ (ಶೇ. ೬.೫೬) ಮತಗಳು ಲಭಿಸಿದ್ದವು. ೨೦೧೪ರಲ್ಲಿ ಸಿಪಿಎಂನ ಪಿ.ಕೆ. ಶ್ರೀಮತಿ, ೨೦೦೯ರಲ್ಲಿ ಕಾಂಗ್ರೆಸ್‌ನ ಕೆ. ಸುಧಾಕರನ್, ೨೦೦೪ರಲ್ಲಿ ಸಿಪಿಎಂನ ಎ.ಪಿ. ಅಬ್ದುಲ್ಲ ಕುಟ್ಟಿ, ೧೯೯೯ರಲ್ಲಿ ಎ.ಪಿ. ಅಬ್ದುಲ್ಲ ಕುಟ್ಟಿ (ಸಿಪಿಎಂ), ೧೯೮೪, ೧೯೮೯, ೧೯೯೧, ೧೯೯೬, ೧೯೯೮ರಲ್ಲಿ ಕಾಂಗ್ರೆಸ್‌ನ ಮುಲ್ಲಪಳ್ಳಿ ರಾಮಚಂದ್ರನ್ ಈ ಕ್ಷೇತ್ರದಲ್ಲಿ ಸತತವಾಗಿ ಗೆದ್ದಿದ್ದರು.

೧೯೮೦ರಲ್ಲಿ ಕಾಂಗ್ರೆಸ್ (ಯು)ನ ಕೆ. ಕುಂಞಂಬು ಮತ್ತು ೧೯೭೧ರಲ್ಲಿ ಸಿಪಿಐಯ ಸಿ.ಕೆ. ಚಂದ್ರಪ್ಪನ್, ೧೯೬೭ರಲ್ಲಿ ಸಿಪಿಎಂನ ಪಟ್ಟಯಂ ಗೋಪಾಲನ್, ೧೯೮೨ರಲ್ಲಿ ಎ.ಕೆ. ಪೊಟ್ಟಕ್ಕಾಡ್ (ಪಕ್ಷೇತರ) ಮತ್ತು ೧೯೫೭ರಲ್ಲಿ ಕಾಂಗ್ರೆಸ್‌ನ ಎಂ.ಕೆ. ಜಿನಚಂದ್ರನ್ ಗೆದ್ದಿದ್ದಾರೆ.

ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದ ಕೆ. ಸುಧಾಕರನ್‌ರನ್ನೇ ಯುಡಿಎಫ್ ಮತ್ತೆ ಕಣಕ್ಕಿಳಿಸಿದೆ. ಎಡರಂಗದ ಉಮೇದ್ವಾರ ರಾಗಿ ಸಿಪಿಎಂನ ಅತ್ಯಂತ ಹಿರಿಯ ನೇತಾರ ಎಂ.ವಿ. ಜಯರಾಜನ್‌ರನ್ನು ಕಣಕ್ಕಿಳಿಸಲಾಗಿದೆ. ಎನ್‌ಡಿಎ ಉಮೇ ದ್ವಾರರಾಗಿ ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ   ಕಣ್ಣೂರಿನ ಜನಪ್ರಿಯ ನೇತಾರರೂ ಆಗಿರುವ ಸಿ. ರಘುನಾಥ್‌ರನ್ನೇ  ಬಿಜೆಪಿ    ಕಣಕ್ಕಿಳಿಸಿದೆ.

ಆ ಮೂಲಕ ಕಾಂಗ್ರೆಸ್‌ಗೆ ಮಾತ್ರವಲ್ಲ ಸಿಪಿಎಂಗೂ ಬಿಜೆಪಿ ಸಡ್ಡು ಹೊಡೆದಿದೆ. ಒಟ್ಟಾರೆಯಾಗಿ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ  ಸಮಾನ ಗೆಲುವಿನ ನಿರೀಕ್ಷೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page