ಲೋಕಸಭಾ ಚುನಾವಣೆ: ಕೇರಳದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ತಿರುವನಂತಪುರ: ಲೋಕಸಭಾ ಚುನಾವಣೆಯ ದ್ವಿತೀಯ ಹಂತದ ನಾಮಪತ್ರ ಸಲ್ಲಿಕೆ ಇಂದು ಬೆಳಿಗ್ಗಿನಿಂದ ಆರಂಭಗೊಂಡಿದೆ. ಕೇರಳ ಸೇರಿದಂತೆ ೧೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ೮೮ ಕ್ಷೇತ್ರಗಳಿಗೆ ದ್ವಿತೀಯ ಹಂತದಲ್ಲಿ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆ ಎಪ್ರಿಲ್ ೪ರ ತನಕ ಮುಂದರಿಯಲಿದೆ. ಎ.೫ರಂದು ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯಲು ಎ.೮ರ ತನಕ ಸಮಯಾವಕಾಶ ನೀಡಲಾಗಿದೆ. ಎಪ್ರಿಲ್ ೨೬ರಂದು ಮತದಾನ ನಡೆಯಲಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಉಮೇದ್ವಾರೆ ಬಿಜೆಪಿಯ ಎಂ.ಎಲ್. ಅಶ್ವಿನಿ ಯವರು ಈ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಮೊದಲು ನಾಮಪತ್ರ ಸಲ್ಲಿಸಿದರು. ಎನ್.ಡಿ.ಎ ನೇತಾರರು ಮತ್ತು ಕಾರ್ಯಕರ್ತರ ಜತೆಗೆ ಮೆರವಣಿಗೆಯಾಗಿ ಬಂದು ಅವರು ಕಲೆಕ್ಟರೇಟ್ನಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇನ್ನೊಂದೆಡೆ ಕೊಲ್ಲಂ ಲೋಕಸಭಾ ಕ್ಷೇತ್ರದಲ್ಲಿ ಎಡರಂಗ ಉಮೇದ್ವಾರ ಶಾಸಕ ಹಾಗೂ ಸಿನೆಮಾ ನಟರಾಗಿರುವ ಮುಖೇಶ್ ಕೂಡಾ ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದಾರೆ.