ವಯನಾಡು ಭೂ ಕುಸಿತ: ಸಾವಿನ ಸಂಖ್ಯೆ 270ಕ್ಕೆ

ವಯನಾಡು:ಕೇರಳದ ಇತಿಹಾಸದಲ್ಲೇ ಅತೀ ದೊಡ್ಡ ಭೂಕುಸಿತ ದುರಂತ ಸೃಷ್ಟಿಸಿದ ವಯನಾಡಿನಲ್ಲಿ ಮಡಿದವರ ಸಂಖ್ಯೆ ಈಗ 270ಕ್ಕೇರಿದೆ. 1592 ಮಂದಿಯನ್ನು ದುರಂತ ಪ್ರದೇಶದಿಂದ ರಕ್ಷಿಸಲಾಗಿದೆ. ಸಂತ್ರಸ್ತರಿಗಾಗಿ ವಯನಾಡು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಾಗಿ 82 ಶಿಬಿರಗಳನ್ನು ಏರ್ಪಡಿಸಲಾಗಿದ್ದು ಅದರಲ್ಲಿ ಒಟ್ಟು 8304 ಮಂದಿ ಕಳೆಯುತ್ತಿದ್ದಾರೆ. ಇದರಲ್ಲಿ 3025 ಗಂಡಸರು, 3398 ಮಹಿಳೆಯರು, 1884 ಮಕ್ಕಳು ಹಾಗೂ 73 ಗರ್ಭಿಣಿಯರು ಒಳಗೊಂಡಿದ್ದಾರೆ. ಇಲ್ಲಿರುವ  ಎಲ್ಲರಿಗೂ ಅಗತ್ಯದ ಎಲ್ಲಾ ನೆರವುಗಳನ್ನು ಸಂಬಂಧಪಟ್ಟ ಇಲಾಖೆಗಳು ಪೂರೈಸುತ್ತಿವೆ ಎಂದು  ವಯನಾಡ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ 1592 ಮಂದಿಯನ್ನು  ರಕ್ಷಿಸಲಾಗಿದೆ. ನಾಪತ್ತೆಯಾದವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಇನ್ನೂ ತ್ವರಿತಗೊಳಿಸಲಾಗಿದೆ. ಮಣ್ಣಿನ ಅವಶೇಷಗಳಡಿ ಇನ್ನೂ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂದು ಶ್ವಾನದಳದ  ಸಹಾಯದಿಂದ ಪರಿಶೀಲಿಸಲಾಗುತ್ತಿದೆ. ವಯನಾಡ್‌ನಲ್ಲಿ ಇಂದು ಭಾರೀ ಮಳೆಗೆ ಸಾಧ್ಯತೆ ಇದ್ದು,  ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿ ಉಂಟುಮಾಡುತ್ತಿದೆಯೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಚೂರಲ್ ಮಲೆ ಮತ್ತು ಮುಂಡಕೈ ಎಂಬೀ ಎರಡು ಗ್ರಾಮಗಳು ಭೂಕುಸಿತದಿಂದ ಸಂಪೂರ್ಣವಾಗಿ ನಾಶಗೊಂಡಿದೆ. ಭಾರೀ ಜನಸಾಂದ್ರತೆ ಹಾಗೂ ಮನೆಗಳ ದಟ್ಟಣೆ ಹೊಂದಿರುವ ಈ ಎರಡು ಗ್ರಾಮಗಳು ಈಗ ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಈ ಎರಡೂ ಗ್ರಾಮಗಳು ವಯನಾಡಿನಲ್ಲಿತ ಎಂಬ ಶಂಕೆ ಮುಂದಿನ ತಲೆಮಾರುಗಳಿಗೆ ಉಂಟಾಗುವ ರೀತಿಯ ಅತೀ ಭೀಕರ ಪ್ರಾಕೃತಿಕ ವಿಕೋಪಕ್ಕೆ ಈ ಪ್ರದೇಶ ತುತ್ತಾಗಿದೆ. 400ರಷ್ಟು ಮನೆಗಳಿದ್ದ ಈ ಪ್ರದೇಶಗಳಲ್ಲಿ ಎಲ್ಲಾ ಮನೆಗಳೂ ಭೂಕುಸಿತದಿಂದ ನೆಲಸಮಗೊಂಡಿದೆ. ಅದೆಷ್ಟೋ ಮಂದಿ ಇನ್ನೂ ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆ ಆಹೋ ರಾತ್ರಿ ಎಂಬಂತೆ ಎಡೆಬಿಡದ  ಭರದಿಂದ ಮೂರನೇ ದಿನವಾದ ಇಂದೂ ಮುಂದುವರಿಯುತ್ತಿದೆ.

ರಕ್ಷಣಾ ಕಾರ್ಯಾಚರಣೆ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆ-ಕೇಂದ್ರ ಸಚಿವ ಕುರ್ಯನ್

ರಕ್ಷಣಾ ಕಾರ್ಯಾಚರಣೆ ಉತ್ತಮ ರೀತಿಯಲ್ಲಿ ಮುಂದುವರಿಯುತ್ತಿದೆಯೆಂದು ಕೇಂದ್ರ ಸಚಿವ ಜೋರ್ಜ್ ಕುರ್ಯನ್ ತಿಳಿಸಿದ್ದಾರೆ. ಸಚಿವರು ಮೊನ್ನೆಯಿಂದ ವಯನಾಡ್‌ನಲ್ಲಿ ಖಾಯಂ ಆಗಿ ಠಿಕಾಣಿ ಹೂಡಿ ಎಲ್ಲವನ್ನೂ ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದಾರೆ. ಭಾರತೀಯ ಭೂಪಡೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕದಳ ಮತ್ತು ಪೊಲೀಸರು ಕೇಂದ್ರ ಪಡೆಯ ನೇತೃತ್ವದಲ್ಲಿ ರಕ್ಷಣಾ  ಕಾರ್ಯಾಚರಣೆಯನ್ನು ಮೂರನೇ ದಿನವಾದ ಇಂದೂ ಮುಂದುವರಿಸುತ್ತಿದೆ. ಪ್ರಧಾನಮಂತ್ರಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿ ಗಂಟೆಗಳಿಗೊಮ್ಮೆ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆಂದೂ ಸಚಿವರು ತಿಳಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ವಯನಾಡಿಗೆ ಆಗಮಿಸಿದ್ದು, ಸ್ಥಿತಿಗತಿಗಳ ಬಗ್ಗೆ ಅವಲೋಕನೆ ನಡೆಸತೊಡಗಿದ್ದಾರೆ. ಅವರ ನೇತೃತ್ವದಲ್ಲಿ ವಯನಾಡ್‌ನಲ್ಲಿ ಇಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಇನ್ನೊಂದೆಡೆ ಕೇಂದ್ರ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಇಂದು ದುರಂತ ಭೂಮಿಗೆ ಆಗಮಿಸಲಿದ್ದಾರೆ.

ಭೂಕುಸಿತದಿಂದ ಸೇತುವೆ ಮುರಿದುಬಿದ್ದು ಬೇರ್ಪಡಿಸಲ್ಪಟ್ಟ ಮುಂಡಕೈಗೆ ತಲುಪಲು ಭಾರತೀಯ ಭೂಪಡೆ ಅಲ್ಲಿ 190 ಸ್ಕ್ವಾರ್ ಫೀಟ್ ಉದ್ದದಲ್ಲಿ  ಕಬ್ಬಿಣದ ಸೇತುವೆ ಬೈಲಿ ಸೇತುವೆ) ನಿರ್ಮಿಸುತ್ತಿದ್ದು, ಇಂದು ಮಧ್ಯಾಹ್ನದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದು ಪೂರ್ಣಗೊಂಡಲ್ಲಿ ಮುಂಡಕೈ ಪ್ರದೇಶದ ರಕ್ಷಣಾ ಕಾರ್ಯಾಚರಣೆ ಇನ್ನಷ್ಟು  ಸುಗಮಗೊಳ್ಳಲಿದೆಯೆಂದು ವಯನಾಡ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page