ವಾಹನ ಅಪಘಾತ : ಯುವ ಕಬಡ್ಡಿ ಪಟು ಸಾವು; ಇನ್ನೋರ್ವ ಗಂಭೀರ
ಕಾಸರಗೋಡು: ಕ್ಷೇತ್ರ ದರ್ಶನ ನಡೆಸಿ ಬೈಕ್ನಲ್ಲಿ ಹಿಂತಿರುಗುತ್ತಿದ್ದ ಯುವ ಕಬಡ್ಡಿ ಪಟು ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.
ಬೇಕಲ ಆರಾಟ್ಟುಕಡವು ಕರಿಪ್ಪೊಡಿಯ ಸಿದ್ದಾರ್ಥ್ (ಸಿದ್ದು-25) ಸಾವನ್ನಪ್ಪಿದ ಯುವಕ. ಈತನ ಜತೆ ಅದೇ ಬೈಕ್ನಲ್ಲಿ ಸಂಚರಿಸುತ್ತಿದ್ದ ಸ್ನೇಹಿತ ಕರಿಪ್ಪೊಡಿಯ ವೈಷ್ಣವ್ (23) ಗಂಭೀರ ಗಾಯಗೊಂಡಿದ್ದು, ಆತನನ್ನು ಚೆಂಗಳ ಇ.ಕೆ. ನಾಯನಾರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಿರುವೋಣಂ ದಿನ ಬೆಳಿಗ್ಗೆ ಸಿದ್ದಾರ್ಥ್ ಮತ್ತು ವೈಷ್ಣವ್ ದೇವಸ್ಥಾನಕ್ಕೆ ಬೈಕ್ನಲ್ಲಿ ಹೋಗಿ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ನೆಲ್ಲಿಯಡ್ಕ ಬಟ್ಟತ್ತೂರು ರಸ್ತೆ ಮೈಕಾನದಲ್ಲಿ ಆ ಬೈಕ್ ಕಾರು ಢಿಕ್ಕಿ ಹೊಡೆದಿದೆ. ಗಂಭೀರಗಾಯ ಗೊಂಡ ಸಿದ್ಧಾರ್ಥ್ ಘಟನೆ ನಡೆದ ಸ್ಥಳದಲ್ಲೇ ಅಸುನೀಗಿದ್ದಾರೆ. ಗಂಭೀರ ಗಾಯಗೊಂಡ ವೈಷ್ಣವ್ನನ್ನು ಊರವರು ತಕ್ಷಣ ಆಸ್ಪತ್ರೆಗೆ ತಲುಪಿಸಿದ್ದಾರೆ.
ಫ್ರೆಂಡ್ಸ್ ಆರಾಟುಕಡವು ಕ್ಲಬ್ನ ಪ್ರಧಾನ ಕಬಡ್ಡಿ ಪಟುವಾಗಿದ್ದ ಸಿದ್ದಾರ್ಥ್, ಟ್ಯಾಕ್ಸಿ ಚಾಲಕ ರವಿ-ಜಯಶ್ರೀ ದಂವತಿಯ ಏಕೈಕ ಪುತ್ರನಾಗಿದ್ದಾನೆ. ಆತನ ಸಾವು ಊರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.