ವಿತರಣೆಗಾಗಿ ಮನೆ ಬಳಿ ದಾಸ್ತಾನು ಇರಿಸಲಾಗಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ಪತ್ತೆ
ಕಾಸರಗೋಡು: ಜಿಲ್ಲೆಯ ವಿವಿಧೆಡೆಗಳಿಗೆ ವಿತರಿಸಲೆಂದು ಮನೆ ಹಿಂದಿನ ಶೆಡ್ನಲ್ಲಿ ದಾಸ್ತಾನು ಇರಿಸಲಾಗಿದ್ದ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿ ದ್ದಾರೆ. ಇದಕ್ಕೆ ಸಂಬಂಧಿಸಿ ನಗರದ ಬೀರಂತಬೈಲಿನಲ್ಲಿ ವಾಸಿಸುತ್ತಿರುವ ಪಿ. ರಮಾನಂದ ಚೌದರಿ (35) ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಮಾನಂದ ಚೌದರಿಯ ತಂದೆ ಮುನ್ನಾ ಚೌದರಿ (56)ರನ್ನು ನಿನ್ನೆ ಬೆಳಿಗ್ಗೆ ನಗರದ ಹಳೇ ಬಸ್ ನಿಲ್ದಾಣ ಪರಿಸರದಿಂದ ೨೪೦ ಪ್ಯಾಕೆಟ್ ತಂಬಾಕು ಉತ್ಪನ್ನಗಳ ಸಹಿತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸರು ಅವರನ್ನು ತೀವ್ರ ವಿಚಾರಣೆಗೊಳ ಪಡಿಸಿದಾಗ ಬೀರಂತಬೈಲಿನಲ್ಲಿರುವ ಅವರ ಮನೆಯಲ್ಲಿ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ದಾಸ್ತಾನು ಇರಿಸಿದ ಮಾಹಿತಿ ಲಭಿಸಿದೆ. ಅದರ ಜಾಡು ಹಿಡಿದು ಪೊಲೀಸರು ಆ ಮನೆಗೆ ಸಾಗಿ ಪರಿಶೀಲಿಸಿದಾಗ ಮನೆ ಯ ಹಿಂದಿನ ಶೆಡ್ನಲ್ಲಿ ಹದಿನೈದಕ್ಕೂ ಹೆಚ್ಚು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ಬಚ್ಚಿಡಲಾಗಿದ್ದ ಭಾರೀ ಪ್ರಮಾಣದ ತಂಬಾಕು ಉತ್ಪನ್ನಗಳು ಪತ್ತೆಯಾಗಿದೆ. ಇದರಲ್ಲಿ 20000ಕ್ಕೂ ಹೆಚ್ಚು ತಂಬಾಕು ಉತ್ಪನ್ನಗಳ ಪ್ಯಾಕೆಟ್ಗಳು ಒಳಗೊಂ ಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದ ಇತರ ಜಿಲ್ಲೆಗಳಿಗೆ ಈ ದಾಸ್ತಾನು ಕೇಂದ್ರದಿಂದ ತಂಬಾಕು ಉತ್ಪನ್ನಗಳನ್ನು ವಿತರಿಸಲಾಗುತ್ತಿದೆ. ರೈಲುಗಳು, ಲಾರಿಗಳು ಮತ್ತಿತರ ವಾಹನಗಳಲ್ಲಿ ಉತ್ತರ ಭಾರತದಿಂದ ಇಲ್ಲಿಗೆ ತಂಬಾಕು ಉತ್ಪನ್ನಗಳನ್ನು ತಂದು ಇಲ್ಲಿ ದಾಸ್ತಾನು ಇರಿಸಲಾಗುತ್ತಿದೆ ಎಂಬ ಮಾಹಿತಿಯೂ ತನಿಖೆಯಲ್ಲಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.