ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ: ಜಿಲ್ಲಾ ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮತ್ತೆ ಕೇಸು ದಾಖಲು
ಮಂಜೇಶ್ವರ: ಆಸ್ಪತ್ರೆಯಲ್ಲಿ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಜಿಲ್ಲಾ ಪಂಚಾಯತ್ ಸದಸ್ಯನೂ ಯೂತ್ ಲೀಗ್ ನೇತಾರನಾದ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮಂಜೇಶ್ವರ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದಾರೆ.
ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ| ಪ್ರಣವ್ ಲಾಲ್ರ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೯ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಗೋಲ್ಡನ್ ಅಬ್ದುಲ್ ರಹ್ಮಾನ್ ೧೯ರಂದು ಸಂಜೆ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಪಾಸಣೆ ನಡೆಸಿದ ಬಳಿಕ ವೈದ್ಯರು ಔಷಧಿ ಬರೆದುಕೊಟ್ಟಿದ್ದಾರೆ. ಆದರೆ ಅದನ್ನು ಫಾರ್ಮಸಿಯಲ್ಲಿ ನೀಡಿದಾಗ ವೈದ್ಯರು ಸೂಚಿಸಿದ ಔಷಧಿ ಅಲ್ಲಿರಲಿಲ್ಲವೆನ್ನಲಾಗಿದೆ. ಇದರಿಂದ ಅಬ್ದುಲ್ ರಹ್ಮಾನ್ ಫಾರ್ಮಸಿಸ್ಟ್ರನ್ನು ಅವಾಚ್ಯವಾಗಿ ನಿಂದಿಸಿದ್ದಾರೆನ್ನಲಾಗಿದೆ. ಬೊಬ್ಬೆ ಕೇಳಿ ಅಲ್ಲಿಗೆ ತಲುಪಿದ ಡಾ| ಪ್ರಣವ್ಲಾಲ್ರಿಗೂ ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಇದರಂತೆ ಡಾ| ಪ್ರಣವ್ ಲಾಲ್ ನೀಡಿದ ದೂರಿನಂತೆ ಪೊಲೀಸರು ಅಬ್ದುಲ್ ರಹ್ಮಾನ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಎರಡು ವಾರಗಳ ಹಿಂದೆಯಷ್ಟೇ ಮಂಜೇಶ್ವರ ಎಸ್.ಐ. ಅನೂಬ್ ರಾತ್ರಿ ಗಸ್ತು ನಡೆಸುತ್ತಿದ್ದಾಗ ಅವರಿಗೆ ಹಲ್ಲೆ ನಡೆದ ಪ್ರಕರಣದಲ್ಲಿ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿ ಬಂಧಿಸಿದ್ದರು. ಇದರಿಂದ ರಿಮಾಂಡ್ಗೊಳಗಾದ ಅಬ್ದುಲ್ ರಹ್ಮಾನ್ಗೆ ಒಂದು ವಾರ ಹಿಂದೆ ನ್ಯಾಯಾಲಯ ಜಮೀನು ನೀಡಿತ್ತು. ಅದರ ಬೆನ್ನಲ್ಲೇ ಇದೀಗ ವೈದ್ಯರಿಗೆ ಬೆದರಿಕೆ ಆರೋಪದಂತೆ ಕೇಸು ದಾಖಲಾಗಿದೆ.