ಶಾಲೆಗೆಂದು ತಿಳಿಸಿ ಮನೆಯಿಂದ ಹೊರಟು ಊರುಬಿಡಲು ಪ್ರಯತ್ನಿಸಿದ ಬಾಲಕ; ರೈಲ್ವೇ ಪೊಲೀಸರ ಸಮಯಪ್ರಜ್ಞೆಯಿಂದ ಬಾಲಕನ ಪತ್ತೆ
ಕುಂಬಳೆ: ಶಾಲೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿ ಊರು ಬಿಡಲು ಪ್ರಯತ್ನಿಸಿದ 12ರ ಹರೆಯದ ಬಾಲಕನನ್ನು ರೈಲ್ವೇ ಪೊಲೀಸರು ಪತ್ತೆಹಚ್ಚಿ ಹೆತ್ತವರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ೪ಗಂಟೆ ವೇಳೆ ಘಟನೆ ನಡೆದಿದೆ.
ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಏಳನೇ ತರಗತಿ ವಿದ್ಯಾರ್ಥಿ ಮಂಗಳೂರು-ತಿರುವನಂತಪುರ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಪ್ರಯಾಣಿಸಿದ್ದನು. ರೈಲು ಪಯ್ಯನ್ನೂರಿಗೆ ತಲುಪಿದಾಗ ಕರ್ತವ್ಯದಲ್ಲಿದ್ದ ಎಸ್‌ಐ ಎಂ.ವಿ. ಪ್ರಕಾಶನ್, ಎಎಸ್‌ಐ ಪ್ರದೀಪ್ ಕುಮಾರ್ ಎಂಬಿವರು ಏಕಾಂಗಿ ಯಾಗಿ ಕುಳಿತಿರುವ ಬಾಲಕನನ್ನು ಕಂಡಿದ್ದಾರೆ. ಸಂಶಯ ತೋರಿದ ಪೊಲೀಸರು ಆತನನ್ನು ವಿಚಾರಿಸಿದಾಗ ಆತನ ಕೈಯಲ್ಲಿ ಟಿಕೆಟ್ ಅಥವಾ ಪ್ರಯಾಣಕ್ಕೆ ಸಂಬಂಧಿಸಿದ ಯಾವು ದೇ ದಾಖಲೆ ಇರಲಿಲ್ಲ. ಬಳಿಕ ನಡೆಸಿದ ತನಿಖೆಯಲ್ಲಿ ಬಾಲಕ ನಿರ್ಧಿಷ್ಟ ಗುರಿ ಯಿಲ್ಲದೆ ಎಲ್ಲಿಗೋ ತೆರಳುತ್ತಿರುವುದಾಗಿ ತಿಳಿದುಬಂತು. ಬಳಿಕ ಬಾಲಕ ನೀಡಿದ ಮಾಹಿತಿಯಂತೆ ಆತನ ತಂದೆ ತಾಯಿಯನ್ನು ಪೊಲೀಸರು ಸಂಪರ್ಕಿಸಿದರು. ಪೊಲೀಸರು ಬಾಲಕನನ್ನು ಬಳಿಕ ಕಣ್ಣೂರು ರೈಲ್ವೇ ಪೊಲೀಸ್ ಠಾಣೆಗೆ ತಲುಪಿಸಿದರು.ತಂದೆ ತಾಯಿ ಅಲ್ಲಿಗೆ ತಲುಪಿದ ಬಳಿಕ ಆತನನ್ನು ಅವರೊಂದಿಗೆ ಬಿಡಲಾಯಿತು.