ಶಾಲೆ ಬಳಿ ರಸ್ತೆ ಬದಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ಫ್ಯೂಸ್ ಸ್ಥಾಪನೆ: ಸ್ಥಳೀಯರಲ್ಲಿ ಆತಂಕ
ಉಪ್ಪಳ: ರಸ್ತೆ ಬದಿಯಲ್ಲಿ ಟ್ರಾನ್ಸ್ಫಾರ್ಮರ್ ಫ್ಯೂಸನ್ನು ಕೈಗೆಟಕುವ ರೀತಿಯಲ್ಲಿ ಸ್ಥಾಪಿಸಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಸುತ್ತುಬೇಲಿ ಕಟ್ಟಿ ಭದ್ರತೆಯನ್ನು ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ತಲಪಾಡಿಯಿಂದ ಕಾಸರಗೋಡು ತನಕದ ವಿದ್ಯುತ್ ಕಂಬ ಸಹಿತ ಟ್ರಾನ್ಸ್ ಫಾರ್ಮರ್ನ್ನು ತೆರವುಗೊಳಿಸಿ ಸರ್ವೀಸ್ ರಸ್ತೆ ಬದಿಯಲ್ಲಿ ಅಳವಡಿಸಲಾಗುತ್ತಿದೆ. ಆದರೆ ಟ್ರಾನ್ಸ್ಫಾರ್ಮರ್ ಜೊತೆ ಹಲವು ಫ್ಯೂಸ್ಗಳನ್ನು ಕೈಗೆಟಕುವ ರೀತಿಯಲ್ಲಿ ಸ್ಥಾಪಿಸಿರುವುದುವಿದ್ಯುತ್ ಇಲಾಖೆ ಅಧಿಕಾರಿಗಳ ಅನಾಸ್ಥೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೊಸಂಗಡಿ, ಉಪ್ಪಳ ಶಾಲಾ ಬಳಿ, ಉಪ್ಪಳ ಪೇಟೆ, ನಯಬಜಾರ್ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಕೈಗೆ ಎಟಕುವ ರೀತಿಯಲ್ಲಿ ಫ್ಯೂಸ್ ಸ್ಥಾಪಿಸಲಾಗಿದೆ. ಇಲ್ಲಿ ಮಕ್ಕಳ ಸಹಿತ ನೂರಾರು ಮಂದಿ ದಿನಿತ್ಯ ನಡೆದಾಡುವ ಪ್ರದೇಶವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಅಧಿಕಾರಿಗಳು ಇದಕ್ಕೆ ಸುತ್ತು ವ್ಯವಸ್ಥಿತ ರೀತಿಯಲ್ಲಿ ಬೇಲಿ ಹಾಕಿ ಭದ್ರತೆಯನ್ನು ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.