ಶಿರೂರು: ಗಂಗಾವಲಿ ಹೊಳೆಯಲ್ಲಿ  ಶೋಧ  ಮುಂದುವರಿಕೆ: ಪತ್ತೆಯಾದ ಎಲುಬು ಲ್ಯಾಬ್‌ಗೆ

ಕಾರವಾರ: ಶಿರೂರಿನಲ್ಲಿ ತಿಂಗಳ ಹಿಂದೆ ಸಂಭವಿಸಿದ ಭೂಕುಸಿತ ವೇಳೆ ನಾಪತ್ತೆಯಾದವರ ಪತ್ತೆಗಾಗಿ ನಡೆಸಿದ ಶೋಧ ವೇಳೆ ಎಲುಬು ಪತ್ತೆಯಾಗಿದೆ. ಇದು ಮನುಷ್ಯನ ಎಲುಬು ಎಂಬುದಾಗಿ ಸಂಶಯಿಸಲಾಗಿದ್ದು, ಈ ಕುರಿತು ಸಮಗ್ರ ಪರಿಶೀಲನೆಗಾಗಿ ಎಲುಬನ್ನು ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ಶಿರೂರಿನ ಗಂಗಾವಲಿ ಹೊಳೆಯಲ್ಲಿ ನಡೆಸಿದ ಶೋಧ ವೇಳೆ ನಿನ್ನೆ ರಾತ್ರಿ ಎಲುಬು ಪತ್ತೆಯಾಗಿದೆ. ಇದು ಮನುಷ್ಯರದ್ದೇ ಅಥವಾ ಇತರ ಪ್ರಾಣಿಯದ್ದಾಗಿರಬಹುದೇ ಎಂದು ತಿಳಿಯಲು ಎಫ್‌ಎಸ್‌ಎಲ್ ಲ್ಯಾಬ್‌ನಲ್ಲಿ ಪರಿಶೀಲನೆ ನಡೆಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಫಲಿತಾಂಶ ಲಭಿಸಬೇಕಾದರೆ ಒಂದು ವಾರ ಕಾಯಬೇಕಾಗಿದೆ.

ಧಾರಾಕಾರ ಮಳೆ ವೇಳೆ ಸಂಭವಿಸಿದ ಭೂ ಕುಸಿತದಲ್ಲಿ ಕಲ್ಲಿಕೋಟೆ ನಿವಾಸಿ ಅರ್ಜುನನ್ ಸಹಿತ ಕೆಲವರು ಮಣ್ಣಿನಡಿ ಸಿಲುಕಿದ್ದರು. ಈ ಪೈಕಿ ಕೆಲವರನ್ನು ಪತ್ತೆಹಚ್ಚಿದ್ದು, ಅರ್ಜುನ್ ಸಹಿತ ಮೂವರನ್ನು ಪತ್ತೆಹಚ್ಚಲಾಗಲಿಲ್ಲ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ.

ನಿನ್ನೆ ನಡೆಸಿದ ಶೋಧ ವೇಳೆ ಟ್ಯಾಂಕರ್ ಲಾರಿಯ ಬಿಡಿಭಾಗಗಳು ಪತ್ತೆಯಾಗಿದೆ. ಗಂಗಾವಲಿ ಹೊಳೆಯಲ್ಲಿ ಡ್ರಜ್ಜರ್ ಬಳಸಿ ಶೋಧ ಕಾರ್ಯ ಇಂದು ಕೂಡಾ ಮುಂದುವರಿಯುತ್ತಿದೆ. ನೀರಿನಲ್ಲಿ ಮುಳುಗಿ ಶೋಧ ನಡೆಸಲು ಅನುಮತಿ ಲಭಿಸದ ಹಿನ್ನೆಲೆಯಲ್ಲಿ ಈಶ್ವರ ಮಲ್ಪೆ ಹಾಗೂ ತಂಡ ಮರಳಿದೆ. ಸರಕಾರದ ವ್ಯವಸ್ಥೆಗಳನ್ನು ಬಳಸಿ ಶೋಧ ಕಾರ್ಯ ನಡೆಸಿದರೆ ಸಾಕೆಂದ ಅಧಿಕಾರಿಗಳು ತಿಳಿಸಿದ ಹಿನ್ನೆಲೆಯಲ್ಲಿ ಈಶ್ವರ ಮಲ್ಪೆ ಮರಳಿರುವುದಾಗಿ ಹೇಳಲಾಗುತ್ತಿದೆ.

ಶಿರೂರು ಜಿಲ್ಲಾಡಳಿತ ಹಾಗೂ ಅರ್ಜುನ್‌ರ ಪತ್ತೆಗಾಗಿ ಶೋಧ ಆರಂಭಿಸಿದ ಈಶ್ವರ ಮಲ್ಪೆ ತಂಡದ ಮಧ್ಯೆ ಆರಂಭದಲ್ಲೇ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. ಡ್ರಜ್ಜಿಂಗ್ ಹಾಗೂ ಡೈವಿಂಗ್ ಏಕಕಾಲದಲ್ಲಿ ನಡೆಸುವುದು ಅಪಾಯಕಾರಿಯೆಂದು ತಿಳಿದು ಈಶ್ವರ ಮಲ್ಪೆಯ ಶೋಧ ಕಾರ್ಯಕ್ಕೆ ಅನುಮತಿ ನಿರಾಕರಿಸಲಾಗಿದೆಯೆಂದು ಜಿಲ್ಲಾಡಳಿತ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page