ಸುಳ್ಯಪದವು ಬಳಿ ಮನೆ ಮಂದಿಯ ಕಟ್ಟಿ ಹಾಕಿ ದರೋಡೆ: ತನಿಖೆ ಕಾಸರಗೋಡಿಗೆ

ಸುಳ್ಯಪದವು: ಬದಿ ಯಡ್ಕ ಬಳಿಯ ನಾರಂಪಾಡಿ ನಿವಾಸಿಯಾದ ತಾಯಿ ಹಾಗೂ ಪುತ್ರನನ್ನು ಕಟ್ಟಿ ಹಾಕಿ ಮಾರಕಾಯುಧಗಳನ್ನು ತೋರಿಸಿ ಬೆದರಿಸಿ ಮನೆ ದರೋಡೆಗೈದ ಘಟನೆ ಪುತ್ತೂರು ಗ್ರಾಮದ ಪಡುವನ್ನೂರು ಕುದ್ಕಾಡಿ ತೋಟದ ಮೂಲೆಯಲ್ಲಿ ನಡೆದಿದೆ. ತೋಟದ ಮೂಲೆಯಲ್ಲಿ ವಾಸವಾಗಿರುವ ಬಡಗನ್ನೂರು ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈಯವರ ಮನೆಯಿಂದ ೧೫ ಪವನ್ ಚಿನ್ನಾಭರಣ, ೪೦ ಸಾವಿರ ರೂ.ವನ್ನು ಕಳ್ಳರು ದರೋಡೆಗೈದಿದ್ದಾರೆ. ನಿನ್ನೆ ಮುಂಜಾನೆ ೨ ವೇಳೆ ಮುಸುಕುಧಾರಿಗಳಾದ ಏಳೆಂಟು ಮಂದಿಯ ತಂಡ ಮಾರಕಾಯುಧಗಳಿಂದ ತಲುಪಿ ಬಾಗಿಲು ಮುರಿದು  ಒಳನುಗ್ಗಿ ಗುರುಪ್ರಸಾದ್ ರೈ ಹಾಗೂ ತಾಯಿ ಕಸ್ತೂರಿ ರೈಯವರನ್ನು ಕಟ್ಟಿಹಾಕಿದೆ.

ಬಳಿಕ ಇವರ ಮನೆಯನ್ನೆಲ್ಲಾ ಜಾಲಾಡಿ ಕಪಾಟಿನಲ್ಲಿದ್ದ ೧೫ ಪವನ್ ಚಿನ್ನಾಭರಣ ಹಾಗೂ ನಗದನ್ನು ದೋಚಿದೆ. ಕಸ್ತೂರಿ ರೈ ಮೂಲತಃ ನಾರಂಪಾಡಿಯ ನಿವಾಸಿಯಾಗಿದ್ದಾರೆ. ಪುತ್ರ ಗುರುಪ್ರಸಾದ್ ಕುದ್ಕಾಡಿ ತೋಟದ ಮೂಲೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಇಲ್ಲಿ ತೋಟವಿದ್ದು, ಕೂಲಿ ಕೆಲಸಕ್ಕೆ ಜನರೂ ಇದ್ದಾರೆ. ಪುತ್ರನ ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಲು ತಾಯಿ ಕಸ್ತೂರಿ ರೈ ಎರಡು ದಿನದ ಹಿಂದೆ ಪುತ್ರನ ಮನೆಗೆ ತೆರಳಿದ್ದರು.

ಕಾಸರಗೋಡು ನಿವಾಸಿಯಾದ ಕೆಲಸದಾಳು ಕಳೆದ ಮೂರು ದಿನದಿಂದ ರಜೆ ಪಡೆದು ಊರಿಗೆ ತೆರಳಿದ್ದಾನೆಂದು ಗುರುಪ್ರಸಾದ್ ತಿಳಿಸಿದ್ದಾರೆ. ಕೂಲಿ ಕೆಲಸದ ವ್ಯಕ್ತಿ ಕಾಸರಗೋಡು ನಿವಾಸಿಯಾಗಿರುವ ಕಾರಣ ತನಿಖೆಯನ್ನು ಕಾಸರಗೋಡಿಗೂ  ವಿಸ್ತರಿಸಲಾಗಿದೆ. ಪುತ್ತೂರು ಪೊಲೀಸರು, ಐಜಿಪಿ ಶ್ವಾನದಳವೆಲ್ಲ ಕಳವು ನಡೆದ ಮನೆಗೆ ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page