ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಅಧಿಸೂಚನೆ ಅಕ್ಟೋಬರ್‌ನಲ್ಲಿ ಜ್ಯಾರಿ
ಕರಡು ಮತದಾರ ಯಾದಿ ಜುಲೈ 21ರಂದು ಪ್ರಕಟ
ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯ ಅಧಿಸೂಚನೆಯನ್ನು ರಾಜ್ಯ ಚುನಾವಣಾ ಆಯೋಗ ಅಕ್ಟೋಬರ್‌ನಲ್ಲಿ ಹೊರಡಿಸುವ ಅಗತ್ಯದ ಸಿದ್ಧತೆಯಲ್ಲಿ ತೊಡಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳಿಗೆ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಬಹುತೇಕ ಈಗಾಗಲೇ ಪೂರ್ಣಗೊಂಡಿವೆ. ಇದರ ಪೂರ್ವಭಾವಿಯಾಗಿ ಹೊಸ ವಾರ್ಡ್‌ಗಳ ಆಧಾರದಲ್ಲಿ ಮನೆಗಳನ್ನು ಕ್ರಮೀಕರಿಸಿ ಕರಡು ಮತದಾರ ಯಾದಿಯನ್ನು ಜುಲೈ 21ರಂದು ಚುನಾವಣಾ ಆಯೋಗ ಪ್ರಕಟಿಸಲಿದೆ.
ರಾಜ್ಯದಲ್ಲಿ ಈಗಿರುವ ಸ್ಥಳೀಯಾಡಳಿತ ಸಂಸ್ಥೆಗಳ ಐದು ವರ್ಷಗಳ ಆಡಳಿತಾವಧಿ ಡಿಸೆಂಬರ್ 20ರೊಳಗಾಗಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಡಿಸೆಂಬರ್ ೨೧ರಂದು ಹೊಸ ಆಡಳಿತ ಸಮಿತಿಗಳ ಅಸ್ತಿತ್ವಕ್ಕೆ ಬರಬೇಕಾಗಿದೆ. ಅದಕ್ಕೆ ಹೊಂದಿಕೊಂಡು ಡಿ. 20ರೊಳಗಾಗಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮತದಾನ ನಡೆಯಬೇಕಾಗಿದೆ. ಚುನಾವಣೆ ನಡೆಯುವ ಒಂದೂವರೆ ತಿಂಗಳ ಮೊದಲು ಚುನಾವಣಾ ಅಧಿಸೂಚನೆ ಹೊರಡಿಸಬೇಕಾಗಿದೆ. ಅದಕ್ಕಿರುವ ಅಗತ್ಯದ ಕ್ರಮದಲ್ಲಿ ಚುನಾವಣಾ ಆಯೋಗ ಈಗಾಗಲೇ ತೊಡಗಿದೆ.
ಜಿಲ್ಲಾ ಪಂಚಾಯತ್‌ಗಳ ವಾರ್ಡ್ ವಿಭಜನೆಯ ಕರಡು ಯಾದಿಯನ್ನು ಜುಲೈ ೨೧ರಂದು ಆಯೋಗ ಪ್ರಕಟಿಸಲಿದೆ. ಕರಡು ವಾರ್ಡ್ ವಿಭಜನೆ ಪಟ್ಟಿಯ ಬಗ್ಗೆ ದೂರುಗಳಿದ್ದಲ್ಲಿ ಅದನ್ನು ಸಲ್ಲಿಸಲು ಜುಲೈ ೨೫ರ ತನಕ ಸಮಯಾವಕಾಶವನ್ನು ಆಯೋಗ ನೀಡಿದೆ.