ಸ್ನೇಹಿತನ ಮೇಲೆ ಪೆಟ್ರೋಲ್ ಬಾಂಬೆಸೆದ ಪ್ರಕರಣ: ಆರೋಪಿ ಸೆರೆ
ಕಾಸರಗೋಡು: ಸ್ನೇಹಿತನ ಮೇಲೆ ಪೆಟ್ರೋಲ್ ಬಾಂಬೆಸೆದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ತಾರಿಕಲ್ ಸಮೀಪದ ಭೀಮನಡಿ ಕೂವಪ್ಪಾರದ ಅಜೇಶ್ (34) ಬಂಧಿತ ಆರೋಪಿ.
ಕಳೆದ ಮೇ 11ರಂದು ರಾತ್ರಿ 11.30ಕ್ಕೆ ಭೀಮನಡಿಗೆ ಸಮೀಪದ ಕೂವಪ್ಪಾರ ನೀರಿನ ಟ್ಯಾಂಕ್ ಬಳಿ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ಕಿಚ್ಚಿರಿಸಿ ಅದನ್ನು ಸ್ನೇಹಿತ ಕೂವಪ್ಪಾರದ ವಾಳುಪರಂಬಿಲ್ನ ಅತುಲ್ ರಾಜೀವನ್ (27)ನ ಮೇಲೆ ಎಸೆದ ದೂರಿನಂತೆ ಚಿತ್ತಾರಿಕಲ್ ಪೊಲೀಸರು ಅಜೇಶ್ನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು ಚಿತ್ತಾರಿಕಲ್ ಪೊಲೀಸರು ಇನ್ಸ್ಪೆಕ್ಟರ್ ರಾಜೀವ್ ವಲಿಯವಳಪ್ಪಿನ್ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಬಂಧಿತ ಅಜೇಶ್ ಪ್ರಕರಣ ವೊಂದರಲ್ಲಿ ಆರೋಪಿಯಾಗಿದ್ದು, ಆತನ ವಿರುದ್ಧ ಅತುಲ್ ರಾಜೀವ್ ಸಾಕ್ಷಿ ಹೇಳಿಕೆ ನೀಡಿದ್ದನೆಂದೂ, ಆ ದ್ವೇಷದಿಂದ ಆರೋಪಿ ಅತುಲ್ನ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದ ನೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೆಟ್ರೋಲ್ ಬಾಂಬೆಸೆದ ಬಳಿಕ ಆರೋಪಿ ತನ್ನ ಮೊಬೈಲ್ ಫೋನನ್ನು ಉಪೇಕ್ಷಿಸಿ ಕರ್ನಾಟಕದ ವಿವಿಧೆಡೆಗಳಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದನೆಂದೂ ಅದನ್ನು ಬೇಧಿಸಿ ಆತನನ್ನು ಸೆರೆ ಹಿಡಿಯಲಾಗಿದೆ ಎಂದ ಪೊಲೀಸರು ತಿಳಿಸಿದ್ದಾರೆ.