ಹತ್ರಾಸ್ ಕಾಲ್ತುಳಿತದಲ್ಲಿ ಸಾವಿನ ಸಂಖ್ಯೆ 130ಕ್ಕೇರಿಕೆ : ಭೋಲೆ ಬಾಬಾ ನಾಪತ್ತೆ
ಲಕ್ನೋ: ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಿನ್ನೆ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಬಲಿಯಾಗಿ ಸಾವನ್ನಪ್ಪಿದವರ ಸಂಖ್ಯೆ ಈಗ 130ಕ್ಕೇರಿದೆ.
ಇದೇ ವೇಳೆ ಸತ್ಸಂಗ ಕಾರ್ಯಕ್ರಮ ಆಯೋಜಿಸಿದ್ದ ಸ್ವಯಂ ಘೋಷಿತ ದೇವತಾ ಮಾನವ ಭೋಲೆ ಬಾಬಾ ಆ ಬಳಿಕ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ. ಸತ್ಸಂಗ ಕಾರ್ಯಕ್ರಮ ನಡೆದ ಬಳಿಕ ಭೋಲೆ ಬಾಬಾ ವೇದಿಕೆಯಿಂದ ಕೆಳಗೆ ಇಳಿಯುತ್ತಿರುವಂತೆಯೇ ಅವರ ಪಾದಸ್ಪರ್ಶಿಸಲು ಅಲ್ಲಿ ನೆರೆದಿದ್ದ ಬೃಹತ್ ಜನಸ್ತೋಮ ಒಮ್ಮೆಲೇ ನುಗ್ಗಿ ಬಂದಾಗ ಭಾರೀ ನೂಕುನುಗ್ಗಲು ಉಂಟಾಗಿ ಅದುವೇ ಕಾಲ್ತುಳಿತಕ್ಕೆ ಇಷ್ಟೊಂದು ಮಂದಿ ಬಲಿಯಾಗಲು ಕಾರಣವೆಂದು ಪೊಲೀಸರು ಹೇಳಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕರಾದ ದೇವಪ್ರಕಾಶ್ ಮಧುಕರ್ ಸೇರಿದಂತೆ ಇತರರ ವಿರುದ್ಧ ಭಾರತೀಯ ನ್ಯಾಯಸಂಹಿತೆಯ 2023ರ ಸೆಕ್ಷನ್ 105, 110, 126(2), 223 ಮತ್ತು 238ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಕಾಲ್ತುಳಿತಕ್ಕೆ ಬಲಿಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳೇ ಆಗಿದ್ದಾರೆ. ಈ ದುರ್ಘಟನೆ ನಡೆದ ಬೆನ್ನಲ್ಲೇ ಸಾಖರ್ ವಿಶ್ವಹರಿ ಭೋಲೆ ಬಾಬಾ ಎಂದೇ ಕರೆಯಲ್ಪಡುತ್ತಿರುವ ಸ್ವಯಂ ಘೋಷಿತ ದೇವ ಮಾನವ ಬಾಬಾ ನಾರಾಯಣ್ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಮೈಸ್ಸುರಿ ಜಿಲ್ಲೆಯ ರಾಂ ಕುಟೀರ್ ಚಾರಿಚೇಬಲ್ ಟ್ರಸ್ಟ್‌ನಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ ಆ ವೇಳೆ ಅವರು ಅಲ್ಲಿರಲಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ಶೋಧ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳಿಸಲಾಗಿದೆ.
ಕಾಲ್ತುಳಿತ ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ಪೊಲೀಸ್ ತಂಡ ರಚಿಸದೆಯೆಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಕಾಲ್ತುಳಿತಕ್ಕೆ ಬಲಿಯಾದ ಆಶ್ರಿತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಧನಸಹಾಯ ಘೋಷಿಸಿದ್ದಾರೆ.