ಹಾಡಹಗಲೇ ಮನೆಯಿಂದ ಚಿನ್ನಾಭರಣ ಕಳವು: ಆರೋಪಿ ಬಂಧನ
ಮಂಜೇಶ್ವರ: ಹಾಡಹಗಲೇ ಬಾಡಿಗೆ ಮನೆಯ ಕಿಟಿಕಿ ತೆರವುಗೊಳಿಸಿ ಒಳಗೆ ನುಗ್ಗಿ ಚಿನ್ನಾಭರಣ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ನಿವಾಸಿಯೂ ಕುಂಜತ್ತೂರಿನಲ್ಲಿ ವಾಸಿಸುವ ಗಣಪತ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈ ವೇಳೆ ರಿಮಾಂಡ್ ವಿಧಿಸಲಾಗಿದೆ. ಕಳವುಗೈದ ಚಿನ್ನವನ್ನು ಆರೋಪಿ ಕೈಯಿಂದ ಪತ್ತೆಹಚ್ಚಿ ವಶಪಡಿಸಲಾಗಿದೆ.
ಉತ್ತರಪ್ರದೇಶ ನಿವಾಸಿ ಯೋಗೀಶ್ ಹಾಗೂ ಕುಟುಂಬ ವಾಸಿಸುವ ಕುಂಜತ್ತೂರು ಕಣ್ವತೀರ್ಥದಲ್ಲಿರುವ ಬಾಡಿಗೆ ಮನೆಯಿಂದ ಕಳೆದ ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ ೨.೩೦ರ ಮಧ್ಯೆ ಕಳವು ನಡೆದಿತ್ತು. ಮನೆಗೆ ನುಗ್ಗಿದ ಕಳ್ಳ ಕಪಾಟಿನಲ್ಲಿದ್ದ ಎರಡೂವರೆ ಪವನ್ ಚಿನ್ನಾಭರಣ ಕಳವು ನಡೆಸಿದ್ದನು. ಈ ಬಗ್ಗೆ ಯೋಗೀಶ್‌ರ ಪತ್ನಿ ಸೋನಲ್ ನಿಶಾದ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ವೇಳೆ ಗಣಪತ್ ಮೇಲೆ ಸಂಶಯಗೊಂಡು ಆತನನ್ನು ಕಸ್ಟಡಿಗೆ ತೆಗೆದು ವಿಚಾರಿಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದನು.