ಹಾರ್ಡ್ವೇರ್ ಅಂಗಡಿಗಳಿಂದ ಕಳವು ನಡೆಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಕಳವು ಆರೋಪಿ ಸೆರೆ
ಕಾಸರಗೋಡು: ಕಾಸರಗೋಡು ಸಹಿತ ಐದು ಜಿಲ್ಲೆಗಳ ಹಾರ್ಡ್ವೇರ್ ವ್ಯಾಪಾರಿಗಳಿಗೆ ಬೆದರಿಕೆಯಾಗಿ ಪರಿಣಮಿಸಿದ್ದ ಕುಖ್ಯಾತ ಕಳವು ಆರೋಪಿಯನ್ನು ಬಂಧಿಸಲಾಗಿದೆ. ಇಡುಕ್ಕಿ ತೊಡುಪುಳ ಕರಿಂಕುನ್ನಂ ತೋಣಿಕತ್ತಡ ನಿವಾಸಿ ಜೋಮೋನ್ ಜೋಸೆಫ್ (50) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಪೇರಾವೂರ್ ಡಿವೈಎಸ್ಪಿ ಎಂ. ಅಜಾದ್ರ ಮೇಲ್ನೋಟದಲ್ಲಿ ಇನ್ಸ್ಪೆಕ್ಟರ್ ಪಿ.ಬಿ. ಸಜೀವನ್ ಒಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಜೋಮೋನ್ ಜೋಸೆಫ್ ವಿರುದ್ಧ ಒಟ್ಟು 30ರಷ್ಟು ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.
2021ರಲ್ಲಿ ಪೇರಾವೂರ್ ಪೊಲೀಸರು ಈತನ ವಿರುದ್ಧ ಕೊನೆಯದಾಗಿ ಕೇಸು ದಾಖಲಿಸಿ ಕೊಂಡಿದ್ದರು. ಅಷ್ಟರಲ್ಲಿ ಈತ ತಲೆಮರೆಸಿಕೊಂಡು ನೇಶನಲ್ ಪರ್ಮಿಟ್ ಲಾರಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು. ಸರಕು ಇಳಿಸಿದ ಬಳಿಕ ಹಾರ್ಡ್ವೇರ್ ಅಂಗಡಿಗಳ ಮುಂದೆ ಲಾರಿಯನ್ನು ನಿಲ್ಲಿಸಿ ಸಿಮೆಂಟ್, ಕಬ್ಬಿಣದ ಸರಳು ಮೊದಲಾದವುಗಳನ್ನು ಕಳವು ನಡೆಸುತ್ತಿರುವುದು ಈತನ ಕೃತ್ಯವಾಗಿದೆ. ಕಳವು ಪ್ರಕರಣದಲ್ಲಿ ವಾರಂಟ್ ಆದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ಜೋಮೋನ್ ತೊಡುಪುಳದಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇದರಂತೆ ಗುರುವಾರ ರಾತ್ರಿ ತೊಡಪುಳಕ್ಕೆ ತಲುಪಿದ ಪೊಲೀಸರು ಬಂಧಿಸಿ ಪೇರಾವೂರಿಗೆ ತಲುಪಿಸಿದ್ದಾರೆ.