ಅಂಗಡಿಯಿಂದ ಚಾಕ್ಲೆಟ್ ಕಳವು: ಬಾಲಕ ಸೇರಿದಂತೆ ಮೂವರ ಸೆರೆ
ಕಾಸರಗೋಡು: ಅಂಗಡಿಯ ಬೀಗ ಮುರಿದು ಒಳನುಗ್ಗಿ ೪೨,೪೩೦ ರೂ. ಮೌಲ್ಯದ ಚಾಕ್ಲೆಟ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ೧೭ ವರ್ಷದ ಬಾಲಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಕುಶಾಲನಗರ ನಿವಾಸಿಗಳಾದ ಫೈಸಲ್ ರಹ್ಮಾನ್ (೧೯), ಬಿ. ವಿವಿಶ್ (೧೯) ಮತ್ತು ೧೭ ವರ್ಷದ ಬಾಲಕ ಬಂಧಿತರಾದ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಅಶ್ರಫ್ (೨೩) ಎಂಬಾತ ತಲೆಮರೆಸಿಕೊಂಡು ಗೋವಾಕ್ಕೆ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜನವರಿ ೧೪ರಂದು ಹೊಸದುರ್ಗ ಕೋಟಚ್ಚೇರಿಯಲ್ಲಿ ಕಾರ್ಯವೆಸಗುತಿ ರುವ ಕೊನಾರ್ಕ್‌ರ ಎಂಟರ್ ಪ್ರೈಸಸ್ ಎಂಬ ಅಂಗಡಿ ಬೀಗ ಮುರಿದು ಒಳನುಗ್ಗಿ ಅಲ್ಲಿಂದ ೪೨,೪೩೦ ರೂ. ಮೌಲ್ಯದ ಚಾಕ್ಲೆಟ್‌ನ ಹೊರತಾಗಿ ೧೬೮೦ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಲಾದ ಪ್ರಕರಣದಲ್ಲಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಂಗಡಿಯ ಸಮೀಪದ ಜವುಳಿ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಮೂಡಿ ಬಂದ ದೃಶ್ಯಗಳ ಆಧಾರದಲ್ಲಿ ಆರೋಪಿಗಳನ್ನು ಸೆರೆ ಹಿಡಿದುವಿಚಾರಣೆ ನಡೆಸಿದ ಬಳಿಕ ಬಂಧನ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ರೀತಿ ಕೆಲವು ದಿನಗಳ ಹಿಂದೆ ಹೊಸದುರ್ಗ ವಡಗರ ಮುಕ್ಕಿನಲ್ಲಿನ ಮಾರ್ಕೆಟಿಂಗ್ ನ ಐಸ್‌ಕ್ರೀಮ್ ಗೋದಾಮೊಂದಕ್ಕೆ ನುಗ್ಗಿ ಅಲ್ಲಿಂದ ಸುಮಾರು ೭೦,೦೦೦ ರೂ. ವನ್ನೂ ಯಾರೋ ಕಳವುಗೈದಿದ್ದರು. ಅಲ್ಲಿನ ಸಿಸಿಟಿವಿಯನ್ನು ಕಳ್ಳರು ಕಳಚಿ ಸಾಗಿಸಿದ್ದರು. ಅದರಿಂದಾಗಿ ಆ ಕಳವು ಪ್ರಕರಣದ ಆರೋಪಿಗಳು ಯಾರು ಎಂಬುದನ್ನು ಗುರುತಿಸಲು ಈ ತನಕ ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.