ಅಕ್ರಮ ದಾಸ್ತಾನು, ಕಾಳಸಂತೆ ಪತ್ತೆಗೆ ಸ್ಪೆಷಲ್ ಬ್ರಾಂಚ್ ರಂಗಕ್ಕೆ
ಕಾಸರಗೋಡು: ಬೆಲೆಯೇರಿಕೆ ಪರಾಕಾಷ್ಠೆಗೇರಿರುವ ವೇಳೆಗಳಲ್ಲಿ ಸಾಧಾರಣವಾಗಿ ನಡೆಯುತ್ತಿರುವ ಕಾಳಸಂತೆ ಮತ್ತು ಅಕ್ರಮ ದಾಸ್ತಾನನ್ನು ಪತ್ತೆಹಚ್ಚಲು ಕೇರಳ ಪೊಲೀಸ್ ಇಲಾಖೆಯ ಸ್ಪೆಷಲ್ ಬ್ರಾಂಚ್ (ಗುಪ್ತಚರ ವಿಭಾಗ) ಪೊಲೀಸರು ಇನ್ನು ಗುಪ್ತವಾಗಿ ತನಿಖೆ ನಡೆಸುವರು.
ಇದಕ್ಕಾಗಿ ಗುಪ್ತಚರ ವಿಭಾಗದ ಪ್ರತ್ಯೇಕ ತಂಡಕ್ಕೆ ರೂಪು ನೀಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಶೇಖ್ ದರ್ವೇಶ್ ಸಾಹೀಬ್ ಅವರು ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಗಾರಿಗಳಿಗಿ ನಿರ್ದೇಶ ನೀಡಿದ್ದಾರೆ. ಹೀಗೆ ಸ್ಪೆಷಲ್ ಬ್ರಾಂಚ್‌ನವರು ನಡೆಸುವ ಗುಪ್ತ ವರದಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಮಾತ್ರವಲ್ಲ ಅಕ್ರಮ ದಾಸ್ತಾನು ಮತ್ತು ಕಾಳಸಂತೆ ವ್ಯವಹಾರ ನಡೆಸುವುದು ಇತ್ಯಾದಿಗಳನ್ನು ತಡೆಗಟ್ಟಲು ವಿವಿಧ ಇಲಾಖೆಗಳು ದಾಳಿ ಮತ್ತು ತಪಾಸಣೆ ನಡೆಸುವ ವೇಳೆ ಅವರಿಗೆ ಅಗತ್ಯದ ಸಂರಕ್ಷಣೆ ಮತ್ತು ಸಹಾಯವನ್ನು ಪೊಲೀಸರು ನೀಡಬೇಕು. ಅವಶ್ಯ ಸಾಮಗ್ರಿಗಳ ಬೆಲೆ ಏರಿಕೆ ಉಂಟಾಗುವ ಸಂದರ್ಭಗಳಲ್ಲೆಲ್ಲಾ ಅದನ್ನು ತಡೆಗಟ್ಟಲು ಸಕಾಲಿಕ ಹಾಗೂ ಕಾನೂನುಪರ ಕ್ರಮಕೈಗೊಳ್ಳಬೇಕೆಂದು ಡಿಜಿಪಿ ನಿರ್ದೇಶ ನೀಡಿದ್ದಾರೆ.