ಅಟ್ಟೆಗೋಳಿ ಭಜನಾ ಮಂದಿರದಿಂದ ಕಾಣಿಕೆ ಹುಂಡಿ ಕಳವು
ಉಪ್ಪಳ: ಉಪ್ಪಳ ಪರಿಸರ ಪ್ರದೇಶಗಳಲ್ಲಿ ಪದೇ ಪದೇ ಕಳವು ಪ್ರಕರಣಗಳು ನಡೆಯುತ್ತಿದ್ದು, ಇದು ನಾಗರಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದೀಗ ಅಟ್ಟೆಗೋಳಿ ವಿಷ್ಣುನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದಲೂ ಕಳವು ನಡೆದಿದೆ. ಭಜನಾ ಮಂದಿರದ ಕಾಣಿಕೆ ಹುಂಡಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ನಿನ್ನೆ ಸಂಜೆ 6.20ರ ವೇಳೆ ದೀಪ ಹಚ್ಚಲು ಸದಾನಂದ ಗುರುಸ್ವಾಮಿ ಭಜನಾ ಮಂದಿರಕ್ಕೆ ಬಂದಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಕಬ್ಬಿಣದ ಹುಂಡಿ ನಾಪತ್ತೆಯಾಗಿದ್ದು, ಅದರಲ್ಲಿ ಸುಮಾರು 10 ಸಾವಿರ ರೂಪಾಯಿಗಳಿತ್ತೆಂದು ಅಂದಾಜಿಸಲಾಗಿದೆ. ನಿನ್ನೆ ಮುಂಜಾನೆ ಕಳವು ಕೃತ್ಯ ನಡೆದಿರಬಹುದೆಂದು ಅಂದಾಜಿಲಾಗಿದೆ. ಈ ಕಳವು ಬಗ್ಗೆ ಮಂದಿರ ಸಮಿತಿ ಅಧ್ಯಕ್ಷ ಸನತ್ ಕುಮಾರ್ ರೈ, ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಪತ್ವಾಡಿಯಲ್ಲಿ ಗಲ್ಫ್ ಉದ್ಯೋಗಿಯಾಗಿರುವ ಅಬ್ದುಲ್ಲ ಎಂಬವರ ಮನೆಯಿಂದ ನಾಲ್ಕೂವರೆ ಪವನ್ ಚಿನ್ನಾಭರಣ, ಒಂದು ಲಕ್ಷ ರೂಪಾಯಿ ಹಾಗೂ 14ಸಾವಿರ ರೂಪಾಯಿ ಬೆಲೆಬಾಳುವ ಇಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿಯುತ್ತಿರುವಂತೆಯೇ ಅಟ್ಟೆಗೋಳಿಯ ಭಜನಾ ಮಂದಿರದಿಂದ ಕಳವು ನಡೆದ ವಿಷಯ ತಿಳಿದುಬಂದಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳಿಂದ ಹಲವು ಕಳವು ಪ್ರಕರಣಗಳು ನಡೆದಿದ್ದರೂ ಆರೋಪಿಗಳನ್ನು ಸೆರೆಹಿಡಿಯಲು ಸಾಧ್ಯವಾಗಿಲಿಲ್ಲ. ಕಳವು ಪ್ರಕರಣಗಳು ಪುನರಾವರ್ತಿಸುತ್ತಿ ರುವುದರಿಂದ ಜನರು ತೀವ್ರ ಆತಂಕದಲ್ಲಿದ್ದಾರೆ. ಇದೇ ವೇಳೆ ಕಳ್ಳರನ್ನು ಸೆರೆಹಿಡಿಯಲು ಸಾಧ್ಯವಾಗದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.