ಅಡಿಕೆ ಕದ್ದ ಆರೋಪ ಹೊರಿಸಿ ಯುವಕನ ಕೊಲೆ: ಆರೋಪಿಗೆ ಜೀವಾವಧಿ ಸಜೆ, ಮೂರು ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಅಡಿಕೆ ಕದ್ದ ಆರೋಪ ಹೊರಿಸಿ ಸಂಬಂಧಿಕನಾದ ಯುವಕನನ್ನು ಕೊಲೆಗೈದ ಪ್ರಕರಣದ ಆರೋಪಿ ಅಡೂರು ಮಾವಿಂಡೆಡಿ ನಿವಾಸಿ ಗಣಪ ನಾಯ್ಕ್ (40)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಎ. ಮನೋಜ್ ಅವರು ಜೀವಾವಧಿ ಸಜೆ ಹಾಗೂ ಮೂರು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿ ಜುಲ್ಮಾನೆ ಪಾವತಿಸಿದ್ದಲ್ಲಿ ಆ ಮೊತ್ತವನ್ನು ಕೊಲೆಗೈಯ್ಯಲ್ಪಟ್ಟ ಯುವಕನ ಆಶ್ರಿತರಿಗೆ ನೀಡಬೇಕು. ಆಶ್ರಿತರು ಹೆಚ್ಚುವರಿ ಆರ್ಥಿಕ ನೆರವಿಗೆ ಅರ್ಹರಾಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಅದಕ್ಕೆ ಹೊಂದಿ ಕೊಂಡು ಅಗತ್ಯದ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶ ನೀಡಿದೆ.
ಆರೋಪಿಯ ಅಡಿಕೆ ತೋಟದಿಂದ ಅಡಿಕೆ ಕದ್ದಿರುವುದಾಗಿ ಆರೋಪಿಸಿ 2019 ಫೆಬ್ರವರಿ 7ರಂದು ಸಂಬಂಧಿಕನಾದ ಅಡೂರು ಕಾಟಿಕಜೆ ಮಾವಿನಡಿಯ ಸುಧಾಕರ ಅಲಿಯಾಸ್ ಚಿದಾನಂದ (30) ಎಂಬವರನ್ನು ಅಡೂರು ಸರಕಾರಿ ರಕ್ಷಿತಾರಣ್ಯದ ವೆಳ್ಳಿಕ್ಕಾನ ಐವರ್‌ಕುಳಿಯಲ್ಲಿ ಕೊಲೆಗೈದ ಆರೋಪದಂತೆ ಆದೂರು ಪೊಲೀಸರು ಆರೋಪಿ ಗಣಪ ನಾಯ್ಕ್‌ನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಪ್ರೋಸಿಕ್ಯೂಷನ್ ಪರ ಸರಕಾರಿ ಅಡಿಶನ್ ಆಂಡ್ ಪಬ್ಲಿಕ್ ಪ್ರೋಸಿಕ್ಯೂಟರ್ ಇ. ಲೋಹಿತಾಕ್ಷನ್ ಮತ್ತು ಆದಿರಾ ಬಾಲನ್ ನ್ಯಾಯಾಲಯದಲ್ಲಿ ವಾದಿಸಿದ್ದರು.