ಅಡಿಕೆ ಕೃಷಿಗೆ ಡ್ರೋನ್ ಉಪಯೋಗಿಸಿ ಔಷಧಿ ಸಿಂಪಡಣೆಗೆ ಅವಕಾಶ ನೀಡಲು ಕಿಸಾನ್ ಸೇನೆ ಆಗ್ರಹ
ಕುಂಬಳೆ: ಜಿಲ್ಲೆಯ ಪ್ರಧಾನ ವಾಣಿಜ್ಯ ಬೆಳೆಯಾದ ಅಡಿಕೆ ಕೃಷಿ ವ್ಯಾಪಕ ಸಮಸ್ಯೆಗಳಲ್ಲಿ ಸಿಲುಕಿದ್ದು, ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಕಿಸಾನ್ ಸೇನೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದೆ. ಜಿಲ್ಲೆಯಲ್ಲಿ ಮಾತ್ರವಾಗಿ ೧೯,೫೦೦ ಹೆಕ್ಟೇರ್ ಭೂಮಿಯಲ್ಲಿ ಅಡಿಕೆ ಕೃಷಿ ನಡೆಸಲಾಗುತ್ತಿದ್ದು, ೨ ಲಕ್ಷ ಕ್ವಿಂಟಾಲ್‌ಗಿಂತ ಅಧಿಕ ಅಡಿಕೆ ಉತ್ಪಾದಿಲಾಗುತ್ತಿದೆ. ಆದರೆ ಇತ್ತೀಚೆಗಿನ ವರ್ಷಗಳಿಂದ ಹಲವು ರೋಗಗಳಿಂದಾಗಿ ಅಡಿಕೆ ಉತ್ಪಾದನೆ ಪಾತಾಳಕ್ಕೆ ಕುಸಿದಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಹಿಂಗಾರ ಕಪ್ಪಾಗುವ ರೋಗ, ಮಹಾಳಿ ರೋಗ ಮುಂತಾದ ರೋಗಗಳಿಂದ ಅಡಿಕೆ ಮರಗಳು ಸಾಯುತ್ತಿವೆ. ಎಲೆ ಚುಕ್ಕಿ ರೋಗ ಅತೀ ವೇಗದಲ್ಲಿ ಹರಡುತ್ತಿದ್ದು, ಅಡಿಕೆ ಮರಗಳಿರುವ ಪ್ರದೇಶಗಳಲ್ಲಿ ಉತ್ಪಾದನೆಯೂ ೮೦ರಷ್ಟು ಕುಸಿದಿದೆ. ವನ್ಯ ಮೃಗಗಳ ಹಾವಳಿಯಿಂದ ಕಂಗೆಟ್ಟಿರುವ ಕೃಷಿಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶ ಉಂಟಾದರೂ ಸರಕಾರದಿಂದ ಯಾವುದೇ ರೀತಿಯ ನಷ್ಟ ಪರಿಹಾರ ಲಭ್ಯವಾಗುವುದಿಲ್ಲ. ಕೃಷಿ ಭವನ ವ್ಯಾಪ್ತಿಯಲ್ಲಿರುವ ಎಲ್ಲಾ ಕೃಷಿಕರಿಗೂ ಭೂಮಿಯ ವಿಸ್ತೀರ್ಣ ಪರಿಗಣಿಸದೆ ಡ್ರೋನ್ ಮೂಲಕ ಅಥವಾ ಕಾರ್ಮಿಕರ ಮೂಲಕ ಉಚಿತವಾಗಿ ಔಷಧಿ ಸಿಂಪಡಿಸುವ ವ್ಯವಸ್ಥೆ ಮಾಡಬೇಕು. ಕೃಷಿ ಸಾಲಗಳ ಅವಧಿಯನ್ನು ಬಡ್ಡಿ ರಹಿತ ಮೂರು ವರ್ಷವಾದರೂ ಮುಂದುವರಿಸಬೇಕು, ಆಸ್ತಿ ಏಲಂ, ಜಪ್ತಿ ಮೊದಲಾದವುಗಳನ್ನು ತಡೆಯಬೇಕು, ಕೃಷಿ ಸಾಲಕ್ಕೆ ಬಡ್ಡಿ ಮನ್ನ ಮಾಡಬೇಕು. ಎಲೆ ಚುಕ್ಕಿ ರೋಗವನ್ನು ಫಸಲ್ ಭೀಮಾ (ಪಿಎಂಎಫ್‌ವೈ) ಯೋಜನೆಯಲ್ಲಿ ಸೇರಿಸಿ ವಿಮಾ ಯೋಜನೆ ಜ್ಯಾರಿಗೊಳಿಸಬೇಕು. ಕಾಡು ಪ್ರಾಣಿಗಳ ಹಾವಳಿ ಉಂಟಾಗದಂತೆ ತಡೆಯಲು ವಿದ್ಯುತ್ ಬೇಲಿ ಅಥವಾ ಟ್ರಂಚ್‌ಗಳನ್ನು ನಿರ್ಮಿಸಿ ಶಾಶ್ವತ ಪರಿಹಾರ ಉಂಟು ಮಾಡಬೇಕು, ನೀರಾವರಿಗೆ ಉಪಯೋಗಿಸುವ ವಿದ್ಯುತ್ ಪಂಪ್‌ಗಳಿಗೆ ಎಲ್ಲಾ ಕೃಷಿಕರಿಗೂ ಅನ್ವಯವಾಗುವಂತೆ ಉಚಿತ ವಿದ್ಯುತ್ ಒದಗಿಸಬೇಕು, ಔಷಧಿ ಸಿಂಪಡಿಸಲು ಕಾರ್ಮಿಕರು ಲಭಿಸದ ಕಾರಣ ಸೂಕ್ತ ಸಮಯದಲ್ಲಿ ಸಿಂಪಡಿಸಲು ಅಸಾಧ್ಯವಾಗುತ್ತಿದ್ದು, ಇದರಿಂದಾಗಿ ಡ್ರೋನ್ ಉಪಯೋಗಿ ಮದ್ದು, ಮೈಕ್ರೋ ನ್ಯೂಟ್ರೀಷನ್ ಮುಂತಾದವುಗಳನ್ನು ಸಿಂಪಡಿಸಲು ಅನುಮತಿ ನೀಡಬೇಕೆಂದು ಕಿಸಾನ್ ಸೇನೆ ಒತ್ತಾಯಿಸಿದೆ.
ಈ ವಿಷಯಗಳನ್ನು ಜಿಲ್ಲಾಧಿಕಾರಿ ಪರಿಗಣಿಸಿ ರಾಜ್ಯ ಸರಕಾರದಿಂದ ಅಡಿಕೆ ಕೃಷಿಕರಿಗೆ ಸೂಕ್ತ ವ್ಯವಸ್ಥೆ ಒದಗಿಸಕೊಡ ಬೇಕೆಂದು ಕಿಸಾನ್ ಸೇನೆ ಪದಾಧಿಕಾರಿ ಗಳು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಕೆ ಇಲ್ಲದ್ದಲ್ಲಿ ಕೃಷಿಕರೆನ್ನಲ್ಲ ಒಟ್ಟುಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವು ದೆಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ. ಈ ಬಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಕಿಸಾನ್ ಸೇನೆ ಜಿಲ್ಲಾಧ್ಯಕ್ಷ ಕೆ. ಗೋವಿಂದ ಭಟ್ ಕೊಟ್ಟಂಗುಳಿ, ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಜೆ, ಜೊತೆ ಕಾರ್ಯದರ್ಶಿ ಸಚಿನ್ ಕುಮಾರ್ ಭಾಗವಹಿಸಿದರು.