ಅಧಿಕಾರಿಗಳು ಕೈಬಿಟ್ಟಾಗ ಸ್ಥಳೀಯರೇ ಮಣ್ಣು ತುಂಬಿಸಿ ಅಣೆಕಟ್ಟು ದುರಸ್ತಿ
ಪೈವಳಿಕೆ: ಅಧಿಕಾರಿ ವರ್ಗ ಕೈ ಬಿಟ್ಟ ಅಣೆಕಟ್ಟಿಗೆ ಸ್ಥಳೀಯರೇ ಸೇರಿ ಜೀವ ತುಂಬಿದರು. ಪೈವಳಿಕೆ ಪಂಚಾಯತ್‌ನ ೮ನೇ ವಾರ್ಡ್ ಬೆರಿಪದವುನಿಂದ ಸುದೆಂಬಳ ಹೊಳೆಗೆ ಸೇರುವ ತೋಡಿಗೆ ಸುಮಾರು ೪೦ ವರ್ಷದ ಹಿಂದೆ ಪಂಚಾಯತ್ ನಿರ್ಮಿಸಿದ ಅಣೆಕಟ್ಟಿಗೆ ಸ್ಥಳೀಯರು ತಡೆಗೋಡೆ ನಿರ್ಮಿಸಿ ನೀರು ಸಂಗ್ರಹಿಸುತ್ತಿದ್ದಾರೆ.
ಈ ಪರಿಸರದ ಹಲವು ಪ್ರದೇಶದ ಕೃಷಿ ಕಾರ್ಯಗಳಿಗೂ ಬಾವಿಯಲ್ಲಿನ ನೀರಿನ ಒರತೆಗೂ ಈ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡರೆ ಪ್ರಯೋಜನವಾಗುತ್ತದೆ. ಅಣೆಕಟ್ಟಿಗೆ ಬೇಸಿಗೆಯಲ್ಲಿ ಹಲಗೆಯನ್ನು ಹಾಕಿ ಮಣ್ಣು ತುಂಬಿಸಲಾಗುತ್ತಿದ್ದರೆ ಈಗ ಈ ಹಲಗೆಗೆ ಬದಲಾಗಿ ಸ್ಥಳೀಯರು ಕಂಗನ್ನು ತುಂಡು ಮಾಡಿ ಹತ್ತಿರ ಹತ್ತಿರ ಇರಿಸಿ ಮಣ್ಣು ತುಂಬಿಸುತ್ತಾರೆ. ಕನಿಯಾಲ ಬಳ್ಳೂರು ರಸ್ತೆಯ ಸುದೆಂಬಳದಲ್ಲಿ ಸೇತುವೆ ಹಾಗೂ ಅಣೆಕಟ್ಟು ನಿರ್ಮಿಸಲಾಗಿತ್ತು. ಈಗ ಸ್ಥಳೀಯ ಕೃಷಿಕ ಸೋಮಶೇಖರರ ನೇತೃತ್ವದಲ್ಲಿ ಸುಂದರ ದೇವಾಡಿಗ, ಸುಂದರ ಮೂಲ್ಯ, ವಸಂತ ಮೂಲ್ಯ, ವಸಂತ ನಾಯ್ಕ್ ಮೊದಲಾದವರು ತಮ್ಮ ಸ್ವಂತ ಖರ್ಚಿನಿಂದ ಅಣೆಕಟ್ಟಿಗೆ ಮಣ್ಣು ತುಂಬಿಸಿದ್ದಾರೆ. ಇವರ ಈ ಕಾರ್ಯವನ್ನು ಊರವರು ಶ್ಲಾಘಿಸಿದ್ದಾರೆ.