ಅನಂತಪುರದಲ್ಲಿ ಹಾಡಹಗಲೇ ಮನೆಯಿಂದ ಚಿನ್ನಾಭರಣ ಕಳವು: ತನಿಖೆ ಆರಂಭ
ಕುಂಬಳೆ: ಅನಂತಪುರದಲ್ಲಿ ಮನೆಯಿಂದ ಹಾಡಹಗಲೇ ಚಿನ್ನಾಭರಣ ಕಳವು ನಡೆದಿದ್ದು, ಈ ಬಗ್ಗೆ ಕುಂಬಳೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಅನಂತಪುರದ ಸುದರ್ಶನ ಎಂಬವರ ಮನೆಯಿಂದ ಮೂರು ಮುಕ್ಕಾಲು ಪವನ್ ಚಿನ್ನಾಭರಣ ಕಳವು ನಡೆದಿದೆ. ಶನಿವಾರ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಗೆ ಮಧ್ಯೆ ಕಳವು ನಡೆದಿರುವುದಾಗಿ ತಿಳಿಸಲಾಗಿದೆ. ಸುದರ್ಶನ್‌ರ ಪತ್ನಿ ಪ್ರಿಯ ಟೈಲರಿಂಗ್ ಕೆಲಸ ಮುಗಿಸಿ ಸಂಜೆ ಮನೆಗೆ ತಲುಪಿದಾಗ ಅಡುಗೆ ಕೋಣೆಯ ಬಾಗಿಲು ಮುರಿದ ಸ್ಥಿತಿಯಲ್ಲಿತ್ತು. ಅವರು ಒಳಗೆ ಪ್ರವೇಶಿಸಿ ನೋಡಿದಾಗ ಬೆಡ್‌ರೂಂನ ಕಪಾಟಿನಲ್ಲಿದ್ದ ಬಟ್ಟೆಬರೆ ಮೊದಲಾದವುಗಳನ್ನು ಚೆಲ್ಲಾಪಿಲ್ಲಿ ಗೊಳಿಸಿರುವುದು ಕಂಡುಬಂದಿದೆ. ಇದೇ ವೇಳೆ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವಿಗೀಡಾಗಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಪ್ರಿಯ ನೀಡಿದ ದೂರಿನಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಮನೆ ಸಮೀಪದ ಸಿಸಿಟಿ ಕ್ಯಾಮರಾಗಳನ್ನು ಪೊಲೀಸರು ಪರಿಶೀಲಿಸಿ ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಹಾಡಹಗಲೇ ಮನೆಗೆ ಕಳ್ಳರು ನುಗ್ಗಿದ ಘಟನೆ ಬೆಳಕಿಗೆ ಬರುವುದರೊಂದಿಗೆ ನಾಡಿನಲ್ಲಿ ಆತಂಕ ಹುಟ್ಟಿಕೊಂಡಿದೆ.