ಅನಂತಪುರ ಕ್ಷೇತ್ರದಲ್ಲಿ ಮೊಸಳೆ ಪ್ರತ್ಯಕ್ಷ ಕ್ಷೇತ್ರಕ್ಕೆ ತಲುಪುತ್ತಿದೆ ಭಕ್ತ ಸಮೂಹ

ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಸರೋವರ ಕ್ಷೇತ್ರದಲ್ಲಿ  ಮತ್ತೆ ಮೊಸಳೆ ಪ್ರತ್ಯಕ್ಷ ವಾಗಿರುವುದು ಭಕ್ತರಲ್ಲಿ ದೀಪಾವಳಿ ಹಬ್ಬಕ್ಕೆ ಇಮ್ಮಡಿ ಪ್ರಭೆ ಮೂಡಿಸಿದೆ. ಶನಿವಾರ ಅಪರಾಹ್ನ ಕ್ಷೇತ್ರದ ಪಶ್ಚಿಮ ಭಾಗದಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದೆ. ಇದನ್ನು ಅರಿತು ನೂರಾರು ಮಂದಿ ಕ್ಷೇತ್ರಕ್ಕೆ ತಲುಪಿದ್ದಾರೆ. ಆದರೆ ಭಕ್ತಜನ ಸಂದಣಿ ಹೆಚ್ಚಾದಾಗ ಮೊಸಳೆ ಗುಹೆಯೊಗೆ ತೆರಳಿದೆ ಎನ್ನಲಾಗಿದೆ.

ಮೊನ್ನೆ ಸರೋವರದಲ್ಲಿ ಕಂಡು ಬಂದ ಮೊಸಳೆ ಸಾಮಾನ್ಯ ಐದು ಅಡಿ ಯಷ್ಟು ಉದ್ದವಿದೆ ಎಂದು ಅಂದಾಜಿ ಸಲಾಗಿದೆ. ಮೊಸಳೆ ಪ್ರತ್ಯಕ್ಷವಾದ ಬಗ್ಗೆ ಕ್ಷೇತ್ರ ಟ್ರಸ್ಟಿ ಸದಸ್ಯ ಮಹಾಲಿಂಗೇಶ್ವರ ಭಟ್ ಖಚಿತ ಮಾಹಿತಿ ನೀಡಿದ್ದಾರೆ.

೨೦೨೪ರ ಕ್ಷೇತ್ರ ಉತ್ಸವದ ಮುಂಚಿತವಾಗಿ ಮೊಸಳೆ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಲಿದೆ ಎಂದು ಭಕ್ತರು ನಿರೀಕ್ಷಿಸಿದ್ದರು. ಅದರಂತೆ ಈಗ ಕ್ಷೇತ್ರದಲ್ಲಿ ಮೊಸಳೆ ಕಂಡು ಬಂದಿರುವುದು ಭಕ್ತರಲ್ಲಿ ಹೆಚ್ಚಿನ ಸಂತೋಷ ಉಂಟುಮಾಡಿದೆ. ಮೊಸಳೆ ಇದೆ ಎಂದು ಖಚಿತವಾದ ಬಳಿಕ ಕ್ಷೇತ್ರಕ್ಕೆ ಭಕ್ತಜನರ ಆಗಮನ ಹೆಚ್ಚುತ್ತಿದೆ.

ಕ್ಷೇತ್ರದ ಸರೋವರದಲ್ಲಿ ಮೊಸಳೆಯನ್ನು ಮೊದಲು ಕಂಡ ಕೆಲವು ಭಕ್ತರು ಈ ಬಗ್ಗೆ ಕ್ಷೇತ್ರ ಪದಾಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಇದನ್ನು ಅಷ್ಟೊಂದು ಮಹತ್ವದಿಂದ ಕಂಡಿರಲಿಲ್ಲ. ಅನಂತರ ಕಾಂಞಂಗಾಡ್ ನಿಂದ ಭಕ್ತರ ತಂಡವೊಂದು ಕ್ಷೇತ್ರಕ್ಕೆ ತಲುಪಿ ಮೊಸಳೆಯ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೆ ಇವರು ಕ್ಷೇತ್ರ ಮೆನೇಜರ್ ಮೊದ ಲಾದವರಿಗೆ ಸರೋವರದಲ್ಲಿ ಮೊಸಳೆ ಇರುವುದನ್ನು ತೋರಿಸಿಕೊಟ್ಟಿದ್ದಾರೆ. ಈ ವೇಳೆಯೇ ಕ್ಷೇತ್ರ ಪದಾಧಿಕಾರಿಗಳು  ಸರೋವರದಲ್ಲಿ ಮೊಸಳೆಯಿರುವುದನ್ನು ಖಚಿತಪಡಿಸಿದ್ದಾರೆ. ಕ್ಷೇತ್ರದ ಸರೋವg ದಲ್ಲಿರುವ ಸಣ್ಣ ಗುಹೆಯ ಭಾಗದಲ್ಲಿ ಮೊಸಳೆ ಕಂಡು ಬಂದಿದೆ. ಮೊಸಳೆಗೆ ನೈವೇದ್ಯ ಸಮರ್ಪಣೆ ಸಹಿತ ಕಾರ್ಯಕ್ರಮಗಳ  ಬಗ್ಗೆ ಕ್ಷೇತ್ರ ಸಮಿತಿ ಸಮಾಲೋಚಿಸಿದ ಬಳಿಕ ನಿರ್ಧರಿಸಲಿದೆಯೆಂದು ಕ್ಷೇತ್ರದ ಮೆನೇಜರ್ ಲಕ್ಷ್ಮಣ ಹೆಬ್ಬಾರ್ ತಿಳಿಸಿದ್ದಾರೆ. ೧೯೪೫ರಲ್ಲಿ ಈ ಕ್ಷೇತ್ರದ ಸರೋವರದಲ್ಲಿದ್ದ ಮೊಸಳೆಯನ್ನು ಬ್ರಿಟಿಷ್ ಸೈನಿಕನೋರ್ವ ಗುಂಡಿಕ್ಕಿ ಕೊಂದಿದ್ದನೆಂದೂ, ಆದರೆ ಕೆಲವೇ ದಿನಗಳೊಳಗೆ  ಬಬಿಯಾ ಎಂಬ ಮೊಸಳೆ ಕ್ಷೇತ್ರ ಸರೋವರದಲ್ಲಿ ಪ್ರತ್ಯಕ್ಷಗೊಂಡಿತ್ತು. ಆ ಮೊಸಳೆ ಕಳೆದ ವರ್ಷ ಅಕ್ಟೋಬರ್ ೯ರಂದು ಮೃತಪಟ್ಟಿತ್ತು. ಅನಂತರ ಇದೀಗ ಮತ್ತೆ ಮೊಸಳೆ ಪ್ರತ್ಯಕ್ಷಗೊಂಡಿರುವುದು ಭಕ್ತರಲ್ಲಿ ಸಂತೋಷ ಮೂಡಿಸಿದೆ.

Leave a Reply

Your email address will not be published. Required fields are marked *

You cannot copy content of this page