ಅನಧಿಕೃತ ಅಂಗಡಿ ತೆರವಿಗೆ ಕುಂಬಳೆ ಬಿಜೆಪಿ ಆಗ್ರಹ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಕುಂಬಳೆ: ಪೇಟೆಯ ಹೃದಯ ಭಾಗದಲ್ಲಿ ಕುಂಬಳೆ ಪಂಚಾಯತ್ ಕಟ್ಟಡದ ವಾರ್ಡ್ ೨೩/೬೧೪ರಲ್ಲಿ ಕಾರ್ಯಾಚರಿಸುತ್ತಿರುವ ಹಣ್ಣು ಹಂಪಲು ಹಾಗೂ ತಂಪು ಪಾನೀಯದ ಅಂಗಡಿಯನ್ನು ಕುಂಬಳೆ ಪಂ.ನ ಅನುಮತಿ ಪಡೆಯದೆ ನವೀಕರಿಸಲಾಗುತ್ತಿದೆ. ಅನಧಿಕೃತವಾಗಿ ನಿರ್ಮಾಣಗೊಳ್ಳುತ್ತಿರುವ ಈ ಅಂಗಡಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಂಚಾಯತ್ ಸಮಿತಿ ಲಿಖಿತವಾಗಿ ಪಂಚಾಯತ್ ಕಾರ್ಯನಿರ್ವ ಹಣಾಧಿಕಾರಿಗೆ ದೂರು ನೀಡಿದೆ. ಅನಧಿಕೃತ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಪಂಚಾಯತ್ ಸಮಿತಿ ತಿಳಿಸಿದೆ. ಈ ಕುರಿತು ಕುಂಬಳೆ ಬಿಜೆಪಿ ಕಚೇರಿಯಲ್ಲಿ ಜರಗಿದ ಸಭೆಯಲ್ಲಿ ಬಿಜೆಪಿ ಪಂಚಾಯತ್ ಸಮಿತಿಯ ಅಧ್ಯಕ್ಷ ಕೆ. ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಮಂಡಲ ಉಪಾಧ್ಯಕ್ಷ ಕೆ. ರಮೇಶ್ ಭಟ್, ಪ್ರೇಮಲತಾ ಎಸ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್, ಜನಪ್ರತಿನಿಧಿ ಗಳಾದ ಪ್ರೇಮಾವತಿ, ಪುಷ್ಪಲತಾ ಕಾಜೂರು, ಸುಲೋಚನಾ, ವಿದ್ಯಾ ಎನ್.ಪೈ, ಹಿರಿಯರಾದ ಗೋಪಾಲ ಪೂಜಾರಿ, ವರುಣ್ ಕುಮಾರ್ ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಬಿಜೆಪಿ ಕಚೇರಿ ಕಾರ್ಯದರ್ಶಿ ಶಶಿ ಕುಂಬಳೆ ವಂದಿಸಿದರು.