ಅನಧಿಕೃತ ಮೀನುಗಾರಿಕೆ ವಿರುದ್ಧ ಫಿಶರೀಸ್ ಇಲಾಖೆ ಕಠಿಣ ಕ್ರಮ
ಕಾಸರಗೋಡು: ಕೇರಳ ಸಮುದ್ರ ಕರಾವಳಿಯಲ್ಲಿ ಅನಧಿಕೃತ ಮೀನುಗಾರಿಕೆಯಲ್ಲಿ ತೊಡಗುವವರ ವಿರುದ್ಧ ಫಿಶರೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ನೈಟ್ ಟ್ರೋಲಿಂಗ್ ನಡೆಸಿದ ಕರ್ನಾಟಕದ ಬೋಟ್ವೊಂದನ್ನು ವಶಪಡಿಸಿ ೨.೫ ಲಕ್ಷ ರೂಪಾಯಿ ದಂಡ ಹೇರಿದೆ. ಈ ರೀತಿಯಲ್ಲಿ ಕಳೆದ ಆರು ತಿಂಗಳೆಳಗೆ ಅನಧಿಕೃತ ಮೀನುಗಾರಿಕೆಯಲ್ಲಿ ತೊಡಗಿದ ಬೋಟ್ಗಳನ್ನು ವಶಪಡಿಸಿ ೫೦ ಲಕ್ಷ ರೂಪಾಯಿ ದಂಡ ವಸೂಲು ಮಾಡಲಾಗಿದೆ. ಮಂಜೇಶ್ವರ ಕರಾವಳಿಗೆ ಹೊಂದಿಕೊಂಡು ಮೀನುಗಾರಿಕೆ ನಡೆಸಿದ ಕರ್ನಾಟಕ ಬೋಟನ್ನು ಫಿಶರೀಸ್ ಇಲಾಖೆ ಹಾಗೂ ಕುಂಬಳ, ಬೇಕಲ, ತೃಕ್ಕರಿಪುರ ಕರಾವಳಿ ಪೊಲೀಸರು ಸೇರಿ ನಡೆಸಿದ ಸಂಯುಕ್ತ ಪಟ್ರೋಲಿಂಗ್ನಲ್ಲಿ ವಶಪಡಿಸಲಾಗಿದೆ. ಸಮುದ್ರ ದಡದಿಂದ ೧೨ ನೋಟಿಕಲ್ ಮೈಲು ದೂರ ಮೀನುಗಾರಿಕೆ ನಡೆಸಲು ಯಾಂತ್ರೀಕೃತ ಬೋಟ್ಗಳಿಗೆ ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾನೂನುಪ್ರಕಾರ ಅನುಮತಿಯಿಲ್ಲ. ಯಾಂತ್ರೀಕೃತ ಬೋಟ್ಗಳ ಅನಧಿಕೃತ ಮೀನುಗಾರಿಕೆಯಿಂದ ಪರಂಪರಾಗತ ಮೀನು ಕಾರ್ಮಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಆದ್ದರಿಂದ ಅನಧಿಕೃತ ಮೀನುಗಾರಿಕೆ ವಿರುದ್ಧ ಕಠಿಣ ಕ್ರಮಗಳೊಂದಿಗೆ ಮುಂದುವರಿಯಲಾಗುವುದೆಂದು ಕಾಸರಗೋಡು ಜಿಲ್ಲಾ ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ಕೆ.ಎ. ಲಬೀಬ್ ತಿಳಿಸಿದ್ದಾರೆ.