ಅನಧಿಕೃತ ಹೊಯ್ಗೆ ಸಾಗಾಟಕ್ಕೆ ಹಲವು ತಂತ್ರಗಳು: ದಂಧೆ ಮಟ್ಟಹಾಕಲು ಪೊಲೀಸರಿಂದ ಕಠಿಣ ಕ್ರಮ
ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟ ವಿರುದ್ಧ ಕುಂಬಳೆ ಠಾಣೆ ಎಸ್ಐ ಟಿ.ಎಂ. ವಿಪಿನ್ ಕಠಿಣ ಕ್ರಮಗಳೊಂದಿಗೆ ಮುಂದೆ ಸಾಗುತ್ತಿರುವಾಗಲೇ ಮತ್ತೊಂದೆಡೆ ಅನಧಿಕೃತ ಹೊಯ್ಗೆ ಸಾಗಾಟದಲ್ಲಿ ಹೊಯ್ಗೆ ಮಾಫಿಯಾಗಳು ಸಕ್ರಿಯರಾಗಿದ್ದಾರೆ. ಶಿರಿಯಾ ಹೊಳೆ ಹಾಗೂ ಸಮುದ್ರದಿಂದ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಹೊಯ್ಗೆಯನ್ನು ವ್ಯಾಪಕವಾಗಿ ಸಾಗಾಟ ನಡೆಸಲಾಗುತ್ತಿದೆ.
ಹೊಳೆ ಹಾಗೂ ಸಮುದ್ರದಿಂದ ಸಂಗ್ರಹಿಸಿದ ಹೊಯ್ಗೆಯನ್ನು ಮೊದಲು ವಳಯಂ, ವೀರನಗರ ಭಾಗಗಳಿಗೆ ತಲುಪಿಸಿ ಅಲ್ಲಿ ರಾಶಿ ಹಾಕಲಾಗುತ್ತಿದೆ. ಅಲ್ಲಿಂದ ರಾತ್ರಿ ಹೊತ್ತಿನಲ್ಲಿ ಟಿಪ್ಪರ್ ಲಾರಿಗಳಲ್ಲಿ ಹೊಯ್ಗೆಯನ್ನು ಇಚ್ಲಂಗೋಡು ವಳಾಕ್ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ರಾಶಿ ಹಾಕಲಾಗುತ್ತಿದ್ದು, ಅಲ್ಲಿಂದ ಮತ್ತೆ ಟೋರಸ್ ಲಾರಿಗಳಲ್ಲಿ ತುಂಬಿಸಿ ಕರ್ನಾಟಕ ಸಹಿತ ವಿವಿಧೆಡೆಗೆ ಸಾಗಿಸುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆಯೆಂದು ದೂರಲಾಗಿದೆ.
ಈ ರೀತಿ ನಡೆಯುವ ಹೊಯ್ಗೆ ಸಂಗ್ರಹ, ಸಾಗಾಟ ದಂಧೆಯ ಹಿಂದೆ ಹಲವು ಮಂದಿ ಕಾರ್ಯಾಚರಿಸು ತ್ತಿದಾ ರೆ. ಹೊಯ್ಗೆ ಸಾಗಾಟಕ್ಕೆ ಹಲವು ಮಂದಿ ಬೆಂಗಾವಲಾಗಿ ನಿರತರಾಗುತ್ತಿದ್ದಾರೆ.
ಕುಂಬಳೆ ಪೇಟೆ, ಬಂದ್ಯೋಡು, ಅಡ್ಕ ಮಾತ್ರವಲ್ಲದೆ ಪೊಲೀಸ್ ಠಾಣೆ ಸಮೀಪದಲ್ಲೂ ಹೊಯ್ಗೆ ದಂಧೆಯ ವ್ಯಕ್ತಿಗಳು ನಿಂತು ಪೊಲೀಸರ ಕಾರ್ಯಾಚರಣೆ ಬಗ್ಗೆ ಹೊಯ್ಗೆ ಸಾಗಾಟಗಾರರಿಗೆ ಸೂಚನೆ ನೀಡುತ್ತಿದ್ದಾರೆನ್ನಲಾಗಿದೆ.
ಪೊಲೀಸರಿಂದಲೂ ಹೊಯ್ಗೆ ದಂಧೆಗಾರರಿಗೆ ಮಾಹಿತಿಗಳು ರವಾನೆಯಾಗುತ್ತಿದೆಯೆಂದೂ ಹೇಳಲಾಗುತ್ತಿದೆ. ಪೊಲೀಸರು ಠಾಣೆಯಿಂದ ಹೊರಟ ತಕ್ಷಣ ಆ ಬಗ್ಗೆ ಹೊಯ್ಗೆ ಸಾಗಾಟಗಾರರಿಗೆ ಮಾಹಿತಿ ಲಭಿಸುತ್ತಿದ್ದು, ಕೂಡಲೇ ಅವರು ಜಾಗ್ರತರಾಗುತ್ತಿದ್ದಾರೆ. ಇದರಿಂದ ಹೊಯ್ಗೆ ಸಾಗಾಟ ಪತ್ತೆಹಚ್ಚಲು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಐ ಟಿ.ಎಂ. ವಿಪಿನ್ ಮಫ್ತಿ ವೇಷ ದಲ್ಲೂ ಅಲ್ಲದೆಯೂ ಅತೀ ಜಾಗ್ರತೆ ಯಿಂದ ಕಾರ್ಯಾಚರಣೆಗೆ ಮುಂದಾ ಗಿದ್ದಾರೆ. ಇದರ ಪರಿಣಾಮವಾಗಿ ಕಳೆದ ಎರಡು ತಿಂಗಳಲ್ಲಿ ಅನಧಿಕೃತವಾಗಿ ಕಾರ್ಯಾಚರಿಸುವ ಹಲವು ಕಡವು ಗಳನ್ನು ಪತ್ತೆಹಚ್ಚಿ ನಾಶಗೊಳಿಸಲಾಗಿದೆ. ಅಲ್ಲದೆ ಹೊಯ್ಗೆ ಸಾಗಾಟದ ೧೭ ಟಿಪ್ಪರ್ ಲಾರಿಗಳನ್ನು ವಶಪಡಿಸಲಾಗಿದೆ. ಅಲ್ಲದೆ ೨೦ರಷ್ಟು ದೋಣಿಗಳನ್ನು ನಾಶಪಡಿಸಲಾಗಿದೆ. ಅನಧಿಕೃತವಾಗಿ ಹೊಯ್ಗೆಸಂಗ್ರಹ, ಸಾಗಾಟಕ್ಕೆ ಪೂರ್ಣ ವಾಗಿ ಕಡಿವಾಣ ಹಾಕಲಾಗುವುದೆಂದು ಎಸ್ಐ ವಿಪಿನ್ ತಿಳಿಸಿದ್ದಾರೆ.