ಅನಧಿಕೃತ ಹೊಯ್ಗೆ ಸಾಗಾಟ ತಡೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದಾಳಿ
ಕಾಸರಗೋಡು: ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ಹಾಗೂ ಹೊಯ್ಗೆ ಸಂಗ್ರಹಿಸಿ ಸಾಗಾಟ ದಂಧೆ ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಅದರ ತಡೆಗೆ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿಯನ್ನು ಬಿಗುಗೊಳಿಸಲಾಗಿದೆ. ಇದರ ಅಂಗವಾಗಿ ನಿನ್ನೆ ಮುಂಜಾನೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಒಂದು ಲೋಡ್ ಹೊಯ್ಗೆ ವಶಪಡಿಸಲಾಗಿದೆ. ಲಾರಿಯಲ್ಲಿ ನಾಲ್ಕು ಟನ್ ಹೊಯ್ಗೆ ಸಾಗಿಸಲಾಗುತ್ತಿತ್ತು. ಲಾರಿ ಹಾಗೂ ಹೊಯ್ಗೆಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿಗೆ ತಲುಪಿಸಲಾಗಿದೆ. ಲಾರಿ ಚಾಲಕನ ಮೊಬೈಲ್ ಪೋನ್ ಕಸ್ಟಡಿಗೆ ತೆಗೆಯಲಾಗಿದೆ.
ಕೊಡ್ಲಮೊಗರು ವಿಲ್ಲೇಜ್ನ ಚೇವಾರು ರಸ್ತೆಯಲ್ಲಿ ಹೊಯ್ಗೆ ಸಾಗಾಟ ನಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಮಂಜೇಶ್ವರ ತಾಲೂಕಿನಲ್ಲಿ ಆರು ವಾಹನಗಳನ್ನು ವಶಪಡಿಸಲಾಗಿತ್ತು. ಮಂಜೇಶ್ವರ ಭೂದಾಖಲೆ ತಹಶೀಲ್ದಾರ್ ಕೆ.ಜಿ. ಮೋಹನ್ರಾಜ್ ನೇತೃತ್ವದಲ್ಲಿ ತಾಲೂಕು ಸ್ಕ್ವಾಡ್ ಲಾರಿಗಳನ್ನು ವಶಪಡಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ಸಂಬಂಧಿಸಿ ೧೦ ವಾಹನಗಳನ್ನು ವಶಪಡಿಸಿ ಅನಧಿಕೃತ ಕೆಂಪುಕಲ್ಲು, ಹೊಯ್ಗೆ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ತಿಳಿಸಿದ್ದಾರೆ.
ಇದೇ ವೇಳೆ ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಲಾರಿಯ ಚಾಲಕರು, ಆರ್.ಸಿ. ಮಾಲಕರ ಸಹಿತ ನಾಲ್ಕು ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕಟ್ಟತ್ತಡ್ಕ, ಪೆರುವಾಡ್ ಎಂಬೆಡೆಗಳಿಂದ ಹೊಯ್ಗೆ ಲಾರಿಗಳನ್ನು ವಶಪಡಿಸಲಾಗಿದೆ. ಚಾಲಕರಾದ ಕಳತ್ತೂರಿನ ಕೆ. ಅಬ್ದುಲ್ಲ (25), ಕಲ್ಲಕಟ್ಟಡ ಅಶೋಕ್ (39), ಟಿಪ್ಪರ್ ಲಾರಿ ಮಾಲಕರಾದ ಮುಹಮ್ಮದ್ ಫಾರೂಕ್, ಉಮೇಶ್ ಎಂ.ಆರ್. ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕುಂಬಳೆ ಠಾಣೆಯ ಅಡಿಶನಲ್ ಎಸ್.ಐ. ಉಮೇಶ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.