ಅಭಿವೃದ್ಧಿ ಕೆಲಸಗಳು ಸ್ಥಗಿತ: ಬದಿಯಡ್ಕ ಪಂ.ನಲ್ಲಿ ಅಸಿ. ಇಂಜಿನಿಯರ್ ಇಲ್ಲದೆ ಎಂಟು ತಿಂಗಳು
ಬದಿಯಡ್ಕ: ಬದಿಯಡ್ಕ ಪಂಚಾಯತ್ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಇಲ್ಲದೆ ಎಂಟು ತಿಂಗಳಾಯಿತು. ಇದರಿಂದಾಗಿ ಪಂಚಾಯತ್ನ ವಿವಿಧ ಭಾಗಗಳಲ್ಲಿ ನಡೆಯಬೇಕಾಗಿದ್ದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ.
ಜನಸಾಮಾನ್ಯರು ತಮ್ಮ ಅತಯಗತ್ಯ ಬೇಡಿಕೆಗಳಾದ ಮನೆ ನಂಬ್ರ, ಮನೆ ನಿರ್ಮಾಣಕ್ಕೆ ಅಗತ್ಯದ ಒಪ್ಪಿಗೆ ಲಭಿಸದೆ ಸಮಸ್ಯೆಯಲ್ಲಿದ್ದಾರೆ. ಇಂಜಿನಿಯರಿಂಗ್ ವಿಭಾಗಕ್ಕೆ ಸಂಬಂಧಿಸಿದ ಇತರ ಅಗತ್ಯಗಳಿಗೆ ತಲುಪುವವರು ಪಂಚಾಯತ್ ಅಧಿಕಾರಿಗಳನ್ನು ಟೀಕಿಸುತ್ತಿದ್ದಾರೆ.
ಈ ಪಂಚಾಯತ್ ಯಾಕಿರುವುದು ಎಂಬ ಜನರ ಪ್ರಶ್ನೆಯ ಮುಂದೆ ಪಂ. ಅಧಿಕಾರಿಗಳಿಗೆ ಉತ್ತರ ನೀಡಲಾಗದ ಸ್ಥಿತಿ ಇದೆ. ಇದೇ ಸಮಸ್ಯೆಯನ್ನು ಮುಂದಿಟ್ಟು ಪಂಚಾಯತ್ ಆಡಳಿತ ಸಮಿತಿ ಸದಸ್ಯರು ಪಂಚಾಯತ್ ಕಚೇರಿ ಕಟ್ಟಡದ ಮುಂಭಾಗ ಎರಡು ಬಾರಿ ಮುಷ್ಕರ ಹೂಡಿದ್ದಾರೆ. ಸದಸ್ಯರು ಮುಂದಿಟ್ಟ ವಿಷಯವನ್ನು ಕಚೇರಿ ಕಟ್ಟಡ ಹೇಗೆ ಪರಿಹರಿಸುವುದು? ಆದುದರಿಂದಾಗಿರಬಹುದು ಆ ಮುಷ್ಕರದಿಂದ ಫಲ ಲಭಿಸದಿರುವುದೆಂದು ಸ್ಥಳೀಯರು ಹೇಳುತ್ತಾರೆ. ಅದಕ್ಕೂ ಮೊದಲು ಜಿಲ್ಲೆಯ ಪಂಚಾಯತ್ ಇಲಾಖೆ ಅಧಿಕಾರಿಗಳ ಮುಂಭಾಗವೂ ಸದಸ್ಯರು ಮುಷ್ಕರ ಹೂಡಿದ್ದರು. ಅದರಲ್ಲೂ ನಿರಾಸೆ ಫಲವಾಗಿದೆ. ಪಂಚಾಯತ್ನ ದುಸ್ಥಿತಿ ವಿರುದ್ಧ ಸಮಾಜ ಸೇವಕ ಹಾರೀಸ್ ಬದಿಯಡ್ಕ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.