ಅಸೌಖ್ಯ ಬಾಧಿಸಿ ಕುಂಬಳೆಗೆ ತಲುಪಿದ ಪಾಲಕ್ಕಾಡ್ ನಿವಾಸಿಗೆ ಅಂಗಡಿ ವರಾಂಡವೇ ಆಸರೆ: ಸಹಾಯದ ನಿರೀಕ್ಷೆಯಲ್ಲಿ
ಕುಂಬಳೆ: ಮಗ ಮನೆಯಿಂದ ಹೊರದಬ್ಬಿದ ಪರಿಣಾಮ ಊರು ಬಿಟ್ಟು ಕುಂಬಳೆಗೆ ತಲುಪಿದ ವ್ಯಕ್ತಿ ಇದೀಗ ಇತರರ ಸಹಾಯ ಯಾಚಿಸುತ್ತಿದ್ದಾರೆ.
ಪಾಲಕ್ಕಾಡ್ ನಿವಾಸಿ ಶರೀಫ್ (೬೩) ಎಂಬವರು ಕಳೆದ ಎರಡು ತಿಂಗಳಿಂದ ಕುಂಬಳೆ ಪೇಟೆಯಲ್ಲಿದ್ದು, ಅಂಗಡಿಗಳ ವರಾಂಡದಲ್ಲಿ ಕಾಲ ಕಳೆಯುತ್ತಿದ್ದಾರೆ. ಎರಡು ವಾರಗಳ ಹಿಂದೆ ಇವರ ದಯನೀಯ ಸ್ಥಿತಿಯನ್ನು ಕಂಡ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನ ಚಾಲಕರೊಬ್ಬರು ಮಂಗಳೂರಿಗೆ ಕರೆದೊಯ್ದು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಕೆಲವು ದಿನಗಳ ಕಾಲ ಅಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುವಂತೆ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದರು. ಆದರೆ ಸಹಾಯಕ್ಕೆ ಯಾರೂ ಇಲ್ಲದುದರಿಂದ ಮೆಡಿಕಲ್ ಕಾಲೇಜಿಗೆ ತೆರಳದೆ ಶರೀಫ್ ಮರಳಿ ಕುಂಬಳೆಗೆ ತಲುಪಿದ್ದಾರೆ.
ಲಿವರ್, ಕಿಡ್ನಿ, ಹೃದಯ ಸಂಬಂಧ ಅಸೌಖ್ಯದಿಂದ ಶರೀಫ್ ಬಳಲುತ್ತಿದ್ದು ಇದೇ ಸ್ಥಿತಿಯಲ್ಲಿದ್ದರೆ ಮುಂದೇನು ಎಂದು ತಿಳಿಯದೆ ಚಿಂತೆಯಲ್ಲಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಸ್ಥೆಯಾದ ಊರಾಲುಂಗಲ್ ಸೊಸೈಟಿಯ ನೌಕರರು ನೀಡುವ ಆಹಾರ ಸೇವಿಸಿ ರಾತ್ರಿ ಹೊತ್ತಿನಲ್ಲಿ ಅಂಗಡಿಗಳ ವರಾಂಡದಲ್ಲಿ ಶರೀಫ್ ನಿದ್ರಿಸುತ್ತಿದ್ದಾರೆ.
ಶರೀಪ್ ೩೩ ವರ್ಷಗಳ ಕಾಲ ನೇಶನಲ್ ಪರ್ಮಿಟ್ ಲಾರಿಗಳಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದರೆನ್ನಲಾಗಿದೆ. ಇವರ ಪತ್ನಿ ೭ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಓರ್ವ ಪುತ್ರ ಹಾಗೂ ಪುತ್ರಿ ಇದ್ದು ಅವರಿಗೆ ಮದುವೆಯಾಗಿದೆ. ತಿಂಗಳುಗಳ ಹಿಂದೆ ಪುತ್ರ ಮನೆಯಿಂದ ಹೊರದಬ್ಬಿದ್ದನೆಂದೂ ಇದರಿಂದ ಅನ್ಯದಾರಿಯಿಲ್ಲದೆ ಇಲ್ಲಿಗೆ ಬಂದು ತಲುಪಿದೆನೆಂದು ಶರೀಫ್ ತನ್ನ ಸಂಕಷ್ಟವನ್ನು ತಿಳಿಸುತ್ತಿದ್ದಾರೆ.