ಅಸೌಖ್ಯ ಬಾಧಿಸಿ ಸಂಕಷ್ಟ ಎದುರಿಸುವ ತಂದೆ, ಪುತ್ರ ನಾಗರಿಕರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲು
ಪೈವಳಿಕೆ: ಅಸೌಖ್ಯ ಬಾಧಿಸಿ ಸಂಕಷ್ಟ ಅನುಭವಿಸುತ್ತಿದ್ದ ತಂದೆ ಹಾಗೂ ಪುತ್ರನ್ನು ನಾಗರಿಕರು ಸೇರಿ ಆಸ್ಪತ್ರೆಗೆ ತಲುಪಿಸಿದ್ದಾರೆ.
ಪೈವಳಿಕೆ ಪಂಚಾಯತ್ ವ್ಯಾಪ್ತಿಯ ದಳಿಕುಕ್ಕು ನಿವಾಸಿ ನಾರಾಯಣ (೭೫) ಹಾಗೂ ಪುತ್ರ ವಿನೋದ್ (೨೯) ಎಂಬಿವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾರಾಯಣ ಹಾಗೂ ಪುತ್ರ ವಿನೋದ್ ಮಾತ್ರವೇ ಮನೆಯಲ್ಲಿ ವಾಸವಾಗಿದ್ದರು. ವಿನೋದ್ ಹಲವು ವರ್ಷಗಳಿಂದ ಅಸೌಖ್ಯ ಬಾಧಿತನಾಗಿದ್ದಾನೆನ್ನ ಲಾಗಿದೆ. ನಾರಾಯಣರಿಗೆ ಕೆಲವು ದಿನಗಳಿಂದ ಆರೋಗ್ಯ ಹದಗೆಟ್ಟಿದೆ. ಇದರಿಂದ ಈ ಇಬ್ಬರು ಸಂಕಷ್ಟ ಮಯ ಜೀವನ ಸಾಗಿಸುತ್ತಿರುವುದು ನಾಗರಿಕರ ಅರಿವಿಗೆ ಬಂದಿದೆ. ಈ ವಿಷಯ ತಿಳಿದು ಮಾಜಿ ಪಂ. ಸದಸ್ಯ ಕಿಶೋರ್ ಕುಮಾರ್ ನಾಯಕ್ ಪೆರ್ವೋಡಿ, ದೇವಿ ಪ್ರಸಾದ್ ಶೆಟ್ಟಿ ಪಟ್ಲ, ವಾರ್ಡ್ ಸದಸ್ಯೆ ಕಮಲ ಎಂಬಿವರ ನೇತೃತ್ವದಲ್ಲಿ ಬಾಯಾರು ಆರೋಗ್ಯ ಕೇಂದ್ರ ಹಾಗೂ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದರಂತೆ ನಿನ್ನೆ ಆರೋಗ್ಯ ಇಲಾಖೆ ಸಿಬ್ಬಂದಿ ನಾರಾಯಣ ಹಾಗೂ ವಿನೋದ್ರನ್ನು ಭೇಟಿ ಮಾಡಿದ್ದಾರೆ. ಅನಂತರ ಸ್ಥಳೀಯ ಯುವಕರು ಸೇರಿ ನಾರಾಯಣರನ್ನು ಸ್ನಾನ ಮಾಡಿಸಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ತಂದೆ, ಮಗನನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.