ಅಸೌಖ್ಯ ಬಾಧಿಸಿ ಸಂಕಷ್ಟ ಜೀವನ ಎದುರಿಸುತ್ತಿದ್ದ ವ್ಯಕ್ತಿ ರೋಗ ವಾಸಿಯಾಗಿ ಮರಳಿ ಊರಿಗೆ

ಕುಂಬಳೆ: ಅಸೌಖ್ಯ ಬಾಧಿಸಿ ಕುಂಬಳೆಯ ಅಂಗಡಿ ವರಾಂಡದಲ್ಲಿ ವಾಸ್ತವ್ಯ ಹೂಡಿದ್ದ ವೇಳೆ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಹಾಗೂ ಕಾಸರಗೋಡು ಸಿ.ಎಚ್.ಸೆಂಟರ್   ನೇತಾರರು, ಪದಾಧಿಕಾರಿಗಳು ಸೇರಿ ಕಾಸರಗೋಡಿನ ಆಸ್ಪತ್ರೆಯಲ್ಲಿ  ದಾಖಲಿಸಿದ್ದ ಪಾಲಕ್ಕಾಡ್ ನಿವಾಸಿ ರೋಗ ವಾಸಿಯಾಗಿ ಊರಿಗೆ ಮರಳಿದ್ದಾರೆ.

ಪಾಲಕ್ಕಾಡ್ ನಿವಾಸಿಯೂ, ಲಾರಿ ಚಾಲಕನಾಗಿ ಹಲವು ವರ್ಷಗಳ ಕಾಲ ದುಡಿದಿದ್ದ ಶರೀಫ್ (೬೨) ಎಂಬವರ ರೋಗ ಗುಣವಾಗಿದ್ದು, ಅವರನ್ನು ಮುಸ್ಲಿಂ ಲೀಗ್ ಹಾಗೂ ಸಿ.ಎಚ್.ಸೆಂಟರ್‌ನ ಪದಾಧಿಕಾರಿಗಳು ಶಾಸಕ ಎ.ಕೆ.ಎಂ. ಅಶ್ರಫ್‌ರ ನೇತೃತ್ವದಲ್ಲಿ  ಕಾಸರಗೋಡಿ ನಿಂದ ರೈಲು ಹತ್ತಿಸಿ ಊರಿಗೆ  ಕಳುಹಿಸಿಕೊಟ್ಟರು. ಪಾಲಕ್ಕಾಡ್‌ಗೆ ತಲುಪಿದೊಡನೆ ಶರೀಫರನ್ನು ಅಲ್ಲಿನ ಶಾಸಕ ಶಾಫಿ ಪರಂಬಿಲ್ ನೇತೃತ್ವದ ಕಾರ್ಯಕರ್ತರು ಬರಮಾಡಿಕೊಂಡು ಮನೆಗೆ ತಲುಪಿಸಲಿರುವ ವ್ಯವಸ್ಥೆ ಮಾಡಲಾಗಿದೆ.ಹಲವು ವರ್ಷಗಳ ಕಾಲ ನೇಶನಲ್ ಪರ್ಮಿಟ್ ಲಾರಿ  ಚಾಲಕನಾಗಿ  ದುಡಿದಿದ್ದ ಶರೀಫ್‌ಗೆ ಕೆಲಸ ನಿರ್ವಹಿಸಲು ಸಾಧ್ಯವಾಗದೆ ಮನೆಯಲ್ಲಿದ್ದರು. ಈ ವೇಳೆ ಅವರನ್ನು ಮನೆಯಿಂದ  ಮಗ ಹೊರದಬ್ಬಿದನೆಂದು ಹೇಳಲಾಗುತ್ತಿದೆ. ಇದರಿಂದ ಜೀವಿಸಲು ದಾರಿ ಕಾಣದ ಶರೀಫ್ ಕುಂಬಳೆಗೆ ತಲುಪಿ ಹಲವು ದಿನಗಳ ಕಾಲ  ಅಂಗಡಿಗಳ ವರಾಂಡದಲ್ಲಿದ್ದರು.  ಶರೀಫ್ರ ಸಂಕಷ್ಟ ಜೀವನದ ಕುರಿತು ಡಿಸೆಂಬರ್ ೨೫ರಂದು ‘ಕಾರವಲ್’ ಚಿತ್ರ ಸಹಿತ ವರದಿ ಪ್ರಕಟಿಸಿತ್ತು.

 ಆ ವರದಿ ಗಮನಕ್ಕೆ ಬಂದ ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಹಾಗೂ  ಕಾಸರಗೋಡು ಸಿ.ಎಚ್. ಸೆಂಟರ್ ನೇತಾರರು ಶರೀಫ್‌ರನ್ನು ಉಪಚರಿಸಿ   ಕಾಸರಗೋಡು ತಳಂಗರೆ ಮಾಲಿಕ್ ದೀನಾರ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯ ವ್ಯವಸ್ಥೆ ಏರ್ಪಡಿಸಿದ್ದರು. ಹನ್ನೆರಡು ದಿನಗಳ ಕಾಲ ಚಿಕಿತ್ಸೆಯಲ್ಲಿದ್ದ ಶರೀಫ್‌ರ ರೋಗ ಇದೀಗ ವಾಸಿಯಾಗಿ ಆರೋಗ್ಯವಂತರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page