ಆಂಟನಿ ಪುತ್ರನ ಬೆನ್ನಲ್ಲೇ ಕರುಣಾಕರನ್ ಪುತ್ರಿ ಪದ್ಮಜಾ ವಿದ್ಯುಕ್ತವಾಗಿ ಬಿಜೆಪಿ ಸೇರ್ಪಡೆ: ಕಾಂಗ್ರೆಸ್ನಲ್ಲಿ ತಳಮಳ
ತಿರುವನಂತಪುರ: ಕಾಂಗ್ರೆಸ್ನ ಹಿರಿಯ ನಾಯಕ, ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಎ.ಕೆ. ಆಂಟನಿಯವರ ಪುತ್ರ ಅನಿಲ್ ಆಂಟನಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಇನ್ನೇನು ಒಂದು ವರ್ಷವಾಗು ತ್ತಿರುವಂತೆಯೇ ಅದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಅತೀ ಹಿರಿಯ ನಾಯಕರೂ ಆಗಿದ್ದ ದಿ| ಕೆ. ಕರುಣಾಕರನ್ರ ಪುತ್ರಿ ಹಾಗೂ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಪದ್ಮಜಾ ವೇಣುಗೋಪಾಲ್ ವಿದ್ಯುಕ್ತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ನಿನ್ನೆ ಸಂಜೆ ದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿಯ ಕೇರಳ ಪ್ರಭಾರಿ ಪ್ರಕಾಶ್ ಜಾವ್ದೇಕರ್ರಿಂದ ಪದ್ಮಜಾ ವೇಣುಗೋಪಾಲ್ ಸದಸ್ಯತನ ಪಡೆಯುವ ಮೂಲಕ ಬಿಜೆಪಿಗೆ ವಿದ್ಯುಕ್ತವಾಗಿ ಸೇರ್ಪಡೆಗೊಂಡರು. ಬಿಜೆಪಿ ಕೇಂದ್ರ ಕಾರ್ಯದರ್ಶಿ ಅರವಿಂದ್ ಮೆನೋನ್ ಮತ್ತು ರಾಷ್ಟ್ರೀಯ ವಕ್ತಾರ ಟೋಮ್ ವಡಕ್ಕನ್ ಈ ವೇಳೆ ಪದ್ಮಜಾರನ್ನು ಬಿಜೆಪಿಗೆ ಸ್ವಾಗತಿಸಿದರು.
ಆಂಟನಿಯವರ ಪುತ್ರ ಅನಿಲ್ ಆಂಟನಿ ಬೆನ್ನಲ್ಲೇ ಕಾಂಗ್ರೆಸ್ನ ಇನ್ನೋರ್ವ ಹಿರಿಯ ನಾಯಕ ಕೆ. ಕರುಣಾಕರನ್ರ ಪುತ್ರಿಯೂ ಈಗ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಕಾಂಗ್ರೆಸ್ನ ರಾಜ್ಯ ವಲಯದಲ್ಲಿ ತಳಮಳ ಸೃಷ್ಟಿಸುವಂತೆ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರಮೋದಿ ದೇಶದ ಸಮರ್ಥ ನಾಯಕರಾಗಿದ್ದಾರೆ. ಆದರೆ ಕಾಂಗ್ರೆಸ್ನಲ್ಲಿ ಅಂತಹ ಯಾವುದೇ ನೇತೃತ್ವವಿಲ್ಲವೆಂದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಪದ್ಮಜಾ ಹೇಳಿದ್ದಾರೆ. ತಾನು ಸ್ಪರ್ಧಿಸಿದ್ದ ಕ್ಷೇತ್ರದಲ್ಲೇ ಕಾಂಗ್ರೆಸ್ಸಿಗರೇ ನನ್ನನ್ನು ಪರಾಭವಗೊಳಿಸಿದ್ದಾರೆ. ಬಳಿಕ ರಾಜ್ಯಸಭಾ ಸೀಟು ನೀಡಲಾ ಗುವುದೆಂದು ಕಾಂಗ್ರೆಸ್ ಭರವಸೆ ನೀಡಿತ್ತು. ಅದನ್ನೂ ನನಗೆ ನೀಡದೆ ನನಗಿಂತ ಕಿರಿಯರಿಗೆ ಆ ಸ್ಥಾನ ನೀಡ ಲಾಗಿದೆ. ಕಾಂಗ್ರೆಸ್ ಸದಾ ನನ್ನನ್ನು ಕಡೆಗಣಿಸುತ್ತಾ ಬಂದಿತ್ತು. ಆ ಮೂಲಕ ನನ್ನನ್ನು ಪಕ್ಷದಿಂದಲೇ ಮೂಲೆಗುಂಪು ಮಾಡುತ್ತಾ ಬಂದಿದೆಯೆಂದು ಅವರು ಹೇಳಿದ್ದಾರೆ. ಕೇರಳದ ಚಾಲಕುಡಿ ಲೋಕಸಭಾ ಕ್ಷೇತ್ರದಲ್ಲಿ ಕೆ. ಪದ್ಮಾಜರನ್ನು ಕಣಕ್ಕಿಳಿ ಸುವ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸುತ್ತಿದೆ.