ಆಂಬುಲೆನ್ಸ್-ಟಾಟಾ ಸುಮೋ ಢಿಕ್ಕಿ ಹೊಡೆದು ೧೪ ವಿದ್ಯಾರ್ಥಿಗಳಿಗೆ ಗಾಯ; ರೋಗಿ ಆಸ್ಪತ್ರೆಗಿರುವ ಪ್ರಯಾಣ ಮಧ್ಯೆ ಮೃತ್ಯು
ಕುಂಬಳೆ: ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆಂಬುಲೆನ್ಸ್ ಹಾಗೂ ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಟಾಟಾ ಸುಮೋ ಢಿಕ್ಕಿ ಹೊಡೆದ ಘಟನೆ ನಿನ್ನೆ ಸಂಜೆ ಶಿರಿಯ ಸೇತುವೆ ಬಳಿ ಸಂಭವಿಸಿದೆ. ಅಪಘಾತ ದಲ್ಲಿ ೧೪ ಮಂದಿ ವಿದ್ಯಾರ್ಥಿಗಳು ಗಾಯಗೊಂ ಡಿದ್ದಾರೆ. ಅಪಘಾತ ಬಳಿಕ ರೋಗಿಯನ್ನು ಬೇರೆ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದರೂ ಉಪ್ಪಳಕ್ಕೆ ತಲುಪಿದಾಗ ಮೃತಪಟ್ಟರು.
ಕಣ್ಣೂರು ಕಾಟಾಚಿರ ನಿವಾಸಿ ಸುರೇಶ್ ಕುಮಾರ್ (೫೦) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮುಟ್ಟಂನ ಖಾಸಗಿ ಶಾಲೆಯ ವಿದ್ಯಾರ್ಥಿಗಳಾದ ಮೊಗ್ರಾಲ್ ಪುತ್ತೂರು ನಿವಾಸಿ ನಿಬಿಲ(೧೪), ಮೊಗ್ರಾಲ್ ನಿವಾಸಿಗಳಾದ ನಸ್ರಿಯಾ (೧೧) ಬಾಶಿಲ (೧೩), ಬಾಸಿತ್ (೮), ಮೊಹಮ್ಮದ್ ಬಾಕಿರ್ (೧೫), ಮೊನುದ್ದೀನ್ ಬಾರಿಶ (೧೧) ಎಂಬಿವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ, ಇತರ ಎಂಟು ಮಂದಿಯನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಯಾರೂ ಗಂಭೀರ ಗಾಯಗೊಂಡಿಲ್ಲವೆಂದು ತಿಳಿಸಲಾಗಿದೆ.
ನ್ಯುಮೋನಿಯಾ ಬಾಧಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುರೇಶ್ ಕುಮಾರ್‌ರನ್ನು ಐಸಿಯು ಸೌಕರ್ಯವುಳ್ಳ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಆದರೆ ಶಿರಿಯ ಸೇತುವೆ ಬಳಿಗೆ ತಲುಪಿದಾಗ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಸಂಬಂಧಿಸಿ ಆಂಬುಲೆನ್ಸ್ ಚಾಲಕ ಪರಿಯಾರಂನ ವಿತಿನ್ ವಿರುದ್ಧ ಪೊಲೀಸರುಕೇಸು ದಾಖಲಿಸಿದ್ದಾರೆ.