ಆಟೋರಿಕ್ಷಾ ಅಪಘಾತ: ಮಧೂರಿನ ಟೈಲರ್ ದಾರುಣ ಮೃತ್ಯು
ಮಧೂರು: ಮಂಗಳೂರು ಕೊಣಾಜೆಯಲ್ಲಿ ಸಂಭವಿಸಿದ ಆಟೋರಿಕ್ಷಾ ಅಪಘಾತದಲ್ಲಿ ಮಧೂರು ಉಳಿಯ ನಿವಾಸಿ ನಾರಾಯಣ ಗಟ್ಟಿ (53) ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮಧೂರು ರೇಶನ್ ಅಂಗಡಿ ಸಮೀಪ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಇವರು ನಾಡಿನಲ್ಲಿ ಚಿರಪರಿಚಿತರಾಗಿದ್ದರು.
ಮೊನ್ನೆ ಸಂಜೆ ಕೊಣಾಜೆಯಲ್ಲಿ ಅಪಘಾತವುಂಟಾಗಿತ್ತು. ಸಂಬಂಧಿಕರೊಬ್ಬರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾರಾಯಣ ಗಟ್ಟಿ ಹಾಗೂ ಇತರ ಇಬ್ಬರು ಕೊಣಾಜೆಗೆ ತೆರಲಿದ್ದರು. ನಾರಾಯಣ ಗಟ್ಟಿಯವರ ಖಾಸಗಿ ಆಟೋರಿಕ್ಷಾದಲ್ಲಿ ಇವರು ತೆರಳಿದ್ದು, ಮರಳಿ ಬರುತ್ತಿದ್ದಾಗ ಇಳಿಜಾರಿನಲ್ಲಿ ಆಟೋರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಅಪಘಾತವುಂಟಾಗಿತ್ತು. ಇದರಿಂದ ಗಂಭೀರ ಗಾಯಗೊಂಡ ನಾರಾಯಣ ಗಟ್ಟಿಯವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ರಿಕ್ಷಾದಲ್ಲಿದ್ದ ಮತ್ತಿಬ್ಬರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ದಿವಂಗತರಾದ ಮಂಜಪ್ಪ ಗಟ್ಟಿ- ಕಮಲ ದಂಪತಿಯ ಪುತ್ರನಾದ ಮೃತರು ಪತ್ನಿ ಸುಮತಿ, ಮಕ್ಕಳಾದ ಪ್ರಜ್ವಲ್, ಪ್ರಖ್ಯಾತ್, ಸಹೋದರ- ಸಹೋದರಿಯರಾದ ನಾಗೇಶ್, ಉದಯ, ಮೋಹನ, ದಿನೇಶ್, ನಾಗಮ್ಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.