ಆಟೋ ರಿಕ್ಷಾದ ಮೇಲೆ ಕಾಡಾನೆ ದಾಳಿ: ಚಾಲಕ ಸಾವು; ಐವರಿಗೆ ಗಾಯ, ಇಬ್ಬರಿಗೆ ಗಂಭೀರ
ಮೂನಾರ್: ರಾಜ್ಯದಲ್ಲಿ ಜನವಾಸ ಕೇಂದ್ರಗಳಿಗೆ ಕಾಡಾನೆಗಳು ನುಗ್ಗಿ ನಡೆಸುವ ದಾಳಿ ಇತ್ತೀಚೆಗಿನಿಂದ ಹೆಚ್ಚಾಗಿ ಅದರಲ್ಲಿ ವಯನಾಡು ಜಿಲ್ಲೆಯಲ್ಲಿ ಮಾತ್ರವಾಗಿ ಕಳೆದ ಎರಡು ವಾರದಲ್ಲಿ ಮಾತ್ರವಾಗಿ ಮೂವರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಅಂತಹ ದಾಳಿಯೊಂದು ಇಡುಕ್ಕಿ ಜಿಲ್ಲೆಯ ಮೂನಾರ್ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕಾಡಾನೆ ದಾಳಿಯಲ್ಲಿ ಆಟೋ ರಿಕ್ಷಾ ಚಾಲಕ ಮೂನ್ನಾರು ಕನ್ನಿಮಲ ಟೋಪ್ ಡಿವಿಷನ್ ನಿವಾಸಿ ಸುರೇಶ್ ಕುಮಾರ್ (ಮಣಿ ೪೫) ಎಂಬವರು ಸಾವನ್ನಪ್ಪಿದ್ದಾರೆ. ಆಟೋ ರಿಕ್ಷಾದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ ಕನ್ನಿಮೂಲೆ ಟೋಪ್ ಡಿವಿಶನ್ನ ಎಸಕಿರಾಜ್ (೪೦), ಪತ್ನಿ ರಜೀನ(೩೭), ಪುತ್ರಿ ಪ್ರಿಯಾ ಮತ್ತು ಸ್ಥಳೀಯ ರಿಜೋ (೩೧) ಎಂಬವರು ಗಾಯಗೊಂಡಿದ್ದು, ಅವರನ್ನು ಮೂನಾರ್ನ ಹೈರೇಂಜ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಗಾಯಗೊಂಡವರಲ್ಲಿ ಎಸಕಿರಾಜ್, ರಜೀನ, ಪ್ರಿಯಾ ಮತ್ತು ರಿಜೋ ಅವರ ಸ್ಥಿತಿ ಗಂಭೀರವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ರಿಕ್ಷಾದಲ್ಲಿ ಇತರ ಮೂವರು ವಲಸೆ ಕಾರ್ಮಿಕರು ರಿಕ್ಷಾದಿಂದ ಹೊರಕ್ಕೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರಲ್ಲಿ ಪ್ರಿಯಾ ನಲ್ಲಿತನ್ನಿ ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳ. ನಿನ್ನೆ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಹೆತ್ತವರೊಂದಿಗೆ ಇತರ ಪ್ರಯಾಣಿಕರ ಜೊತೆ ಸುರೇಶ್ ಕುಮಾರ್ರ ಆಟೋ ರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ದಾರಿ ಮಧ್ಯೆ ನಿನ್ನೆ ರಾತ್ರಿ ೧೦ ಗಂಟೆಗೆ ಕನ್ನಿಮಲ ಟೋಪ್ ಡಿವಿಶನ್ಗೆ ತಲುಪಿದಾಗ ರಸ್ತೆಗೆ ಅಡ್ಡವಾಗಿ ನುಗ್ಗಿ ಬಂದ ಗಂಡು ಆನೆಯೊಂದು ತನ್ನ ದಂತದಿಂದ ಆಟೋ ರಿಕ್ಷಾವನ್ನು ಎತ್ತಿ ಬಿಸಾಡಿದೆ. ಆ ವೇಳೆ ರಿಕ್ಷಾ ಚಾಲಕ ಸುರೇಶ್ ಕುಮಾರ್ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇತರರನ್ನು ಊರವರು ಸೇರಿ ಆಸ್ಪತ್ರೆಗೆ ಸಾಗಿಸಿದರು. ಆಟೋ ರಿಕ್ಷಾ ಸಂಪೂರ್ಣ ನುಚ್ಚುನೂರಾಗಿದೆ. ಕಾಡಾನೆಯ ಹಾವಳಿಯನ್ನು ತಡೆಗಟ್ಟುವ ವಿಷಯದಲ್ಲಿ ಅರಣ್ಯ ಪಾಲಕರ ನಿರ್ಲಕ್ಷ್ಯ ನೀತಿಯನ್ನು ಪ್ರತಿಭಟಿಸಿ ಎಡರಂಗ ಮತ್ತು ಐಕ್ಯರಂಗ ಇಂದು ಕೆಡಿಎಚ್ ಗ್ರಾಮದ ವ್ಯಾಪ್ತಿಯಲ್ಲಿ ಹರತಾಳ ಆಚರಿಸುತ್ತಿದೆ.