ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ ಮಹೋತ್ಸವ: ವಿವಿಧ ಕಾರ್ಯಕ್ರಮಗಳು
ಮುಳ್ಳೇರಿಯ: ಆದೂರು ಭಗವತೀ ಕ್ಷೇತ್ರದಲ್ಲಿ 351 ವರ್ಷಗಳ ಬಳಿಕ ಮುಂದಿನ ಜನವರಿಯಲ್ಲಿ ನಡೆಯುವ ಪೆರುಂಕಳಿಯಾಟ ಮಹೋತ್ಸವದ ಪ್ರಚಾರಾರ್ಥ ದೈವಗಳ ಊರ ಮೆರವಣಿಗೆ ನಡೆಯಿತು. ಆದೂರು ಭಗವತೀ ಕ್ಷೇತ್ರದಿಂದ ಹೊರಟು ಶ್ರೀ ಪಂಚಲಿಂಗೇಶ್ವರ ಕ್ಷೇತ್ರಕ್ಕೆ ವಾದ್ಯಘೋಷಗಳೊಂದಿಗೆ ಮೆರವಣಿಗೆ ನಡೆಯಿತು. ಮರುದಿನ ಕಾನಕ್ಕೋಡು ವಲಿಯವೀಡ್ ತರವಾಡಿಗೆ, ಏಳುನಾಡುಗುತ್ತು ದೊಡ್ಡಮನೆ ಎಂಬೆಡೆಗೆ ಮೆರವಣಿಗೆ ನಡೆಯಿತು. ಶನಿವಾರ ಕುಂಟಾರು ಮಹಾವಿಷ್ಣು ಕ್ಷೇತ್ರ, ತಂತ್ರಿಯವರ ಮನೆ, ಸಮೀಪದ ತರವಾಡು ಮನೆಗಳಿಗೆ ಮೆರವಣಿಗೆ ನಡೆಯಿತು.ಈ ತಿಂಗಳ 27ರಂದು ಪೆರುಂಕಳಿಯಾಟದ ಮುಹೂರ್ತ ಮರ ಕಡಿಯುವ ಕಾರ್ಯಕ್ರಮ ಜರಗಲಿದೆ.
ಡಿಸೆಂಬರ್ 8ರಂದು ಉಗ್ರಾಣಕ್ಕೆ ಶಿಲಾನ್ಯಾಸ, 26ರಂದು ಧ್ವಜಸ್ತಂಭ, 28ರಂದು ಕೊಡಿಮರ ಮುರಿಯುವುದು ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. 2025ಜನವರಿ 6ರಂದು ಭತ್ತ ಅಳೆಯುವುದು, 12ರಂದು ಗೊನೆ ಕಡಿಯುವುದು ನಡೆದು 19ರಿಂದ 24ರವರೆಗೆ ಪೆರುಂಕಳಿಯಾಟ ನಡೆಯಲಿದೆ.