ಆನ್ಲೈನ್ನಲ್ಲಿ ಖರೀದಿಸಿದ್ದು ಪ್ಯಾಂಟ್, ಲಭಿಸಿದ್ದು ಹರಕಲು ಶರ್ಟ್
ಕುಂಬಳೆ: ಆನ್ಲೈನ್ನಲ್ಲಿ ಪ್ಯಾಂಟ್ ಬುಕ್ ಮಾಡಿದ ವ್ಯಕ್ತಿಗೆ ಲಭಿಸಿದ್ದು ಎರಡು ಹರಕಲು ಅಂಗಿ. ಕುಂಬಳೆಯಲ್ಲಿ ಈ ಘಟನೆ ನಡೆದಿದೆ. ಭಾಸ್ಕರ ನಗರ ನಿವಾಸಿ ಅಶ್ರಫ್ ಎಂಬ ವರು ಆನ್ಲೈನ್ ಕಂಪೆನಿಯಲ್ಲಿ ಇನ್ಸ್ಟಾಗ್ರಾಂ ಮೂಲಕ ಎರಡು ಪ್ಯಾಂಟ್ ಬುಕ್ ಮಾಡಿದ್ದರು. ಅದಕ್ಕೆ ೯೯೯ ರೂ.ವನ್ನು ಪಾವತಿಸಿದ್ದರು. ದೆಹಲಿಯ ಫ್ಯಾಶನ್ ಸ್ಟ್ರೀಟ್ನಲ್ಲಿ ಕಚೇರಿ ಹೊಂದಿದ್ದ ಈ ಕಂಪೆನಿಯಿಂದ ಲಭಿಸಿದ್ದು ಎರಡು ಹರಿದ ಶರ್ಟ್ ಆಗಿದೆ. ಮೊನ್ನೆ ಇವರಿಗೆ ಪಾರ್ಸೆಲ್ ತಲುಪಿದ್ದು ನೋಡಿದಾಗ ಹರಿದ ಶರ್ಟ್ ಎಂದು ತಿಳಿದುಬಂದಿದೆ. ಈಬಗ್ಗೆ ಅಶ್ರಫ್ ಸೈಬರ್ ಸೆಲ್ಗೆ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. ಆನ್ಲೈನ್ ಮೂಲಕ ಸಾಮಗ್ರಿ ಖರೀದಿಸುವವರು ಜಾಗ್ರತೆ ವಹಿಸದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ.